

ಅವಿನಾಶ್ ಜೈನಹಳ್ಳಿ ಮೈಸೂರು
ಸಾಂಸ್ಕೃತಿಕ ರಾಜಧಾನಿ ಮೈಸೂರು ನಗರದ ಪರಿಸರ ಸ್ನೇಹಿ ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಲು ಕೆಎಸ್‌ಆರ್‌ಟಿಸಿ ಮುಂದಾಗಿದೆ. ಮುಖ್ಯವಾಗಿ ನಾಡಿನ ಅಧಿದೇವತೆ ತಾಯಿ ಶ್ರೀ ಚಾಮುಂಡೇಶ್ವರಿ ದೇವಿ ನೆಲೆಸಿರುವ ಚಾಮುಂಡಿಬೆಟ್ಟದಲ್ಲಿ ಪರಿಸರ ಕಾಪಾಡುವ ಉದ್ದೇಶವನ್ನು ಕೆಎಸ್‌ಆರ್‌ಟಿಸಿ ಹೊಂದಿದೆ.
ಈಗಾಗಲೇ ಮೈಸೂರು-ಬೆಂಗಳೂರು ನಡುವೆ ಕೆಎಸ್‌ಆರ್‌ಟಿಸಿ ಎಲೆಕ್ಟ್ರಿಕ್ ಬಸ್‌ಗಳು ಸಂಚರಿಸುತ್ತಿವೆ. ಇದನ್ನು ಮೈಸೂರು ನಗರಕ್ಕೂ ವಿಸ್ತರಿಸಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ. 200 ಎಲೆಕ್ಟ್ರಿಕ್ ಬಸ್‌ಗಳಿಗೆ ಡಿಪಿಆರ್ ಸಲ್ಲಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಯಡಿ ಎಲೆಕ್ಟ್ರಿಕ್ ಬಸ್ ಲಭ್ಯವಾಗಲಿದೆ. ಇದರಿಂದ ಪೆಟ್ರೋಲ್, ಡೀಸೆಲ್ ವಾಹನಗಳಿಗೆ ಬ್ರೇಕ್ ಬೀಳಲಿದೆ. ಸದ್ಯ ಬೆಂಗಳೂರು ನಗರದಲ್ಲಿ ಮಾತ್ರ ಎಲೆಕ್ಟ್ರಿಕ್ ಬಸ್‌ಗಳು ಓಡಾಡುತ್ತಿವೆ.
ಪ್ರಸ್ತುತ ನಗರದಲ್ಲಿ ಯಾವುದೇ ಎಲೆಕ್ಟ್ರಿಕ್ ಬಸ್ ಸಂಚಾರ ಮಾಡುತ್ತಿಲ್ಲ. ಈ ನಿಟ್ಟಿನಲ್ಲಿ ಪೂರೈಕೆಯಾಗುವ 200 ಬಸ್‌ಗಳು ನಗರದಾದ್ಯಂತ ಸಂಚರಿಸಲಿವೆ. ಇದರಿಂದ ಮೈಸೂರಿನ ಜನತೆ ಹಾಗೂ ಪ್ರವಾಸಿಗರು ಎಲೆಕ್ಟ್ರಿಕ್ ಬಸ್ ಸಂಚಾರದ ಅನುಭವ ಪಡೆಯಬಹುದು.
ರೀಚಾರ್ಜ್ ವ್ಯವಸ್ಥೆ ಅಗತ್ಯ: ಎಲೆಕ್ಟ್ರಿಕ್ ಬಸ್‌ಗಳಿಗೆ ಪ್ರತ್ಯೇಕ ರೀಚಾರ್ಜ್ ವ್ಯವಸ್ಥೆ ಅವಶ್ಯ. 145 ಕಿಲೋ ವ್ಯಾಟ್ ಸಾಮರ್ಥ್ಯದ ಮೋಟಾರು ತಿರುಗಲು ಹೆಚ್ಚು ವಿದ್ಯುತ್ ಶಕ್ತಿ ಬೇಕಾಗುತ್ತದೆ. ಇದಕ್ಕೆ ಸಾಮಾನ್ಯ ಪ್ಲಗ್‌ಗಳನ್ನು ಬಳಸಿ ಬ್ಯಾಟರಿ ಚಾರ್ಜ್ ಮಾಡಲು ಸಾಧ್ಯವಿಲ್ಲ. ಡಿಪೋದಲ್ಲಿ ಪ್ರತ್ಯೇಕವಾದ ವ್ಯವಸ್ಥೆ ಮಾಡಿ ಚಾರ್ಜಿಂಗ್ ಉಪಕರಣಗಳನ್ನು ಇಡಬೇಕಾಗುತ್ತದೆ. ಹೀಗಾಗಿ, ಬಸ್‌ಗಳಿಗೆ ಚಾರ್ಜ್ ಮಾಡಿಕೊಳ್ಳಲು ಬನ್ನಿಮಂಟಪ, ಕುವೆಂಪುನಗರ, ವಿಜಯನಗರ ಹಾಗೂ ಸಾತಗಳ್ಳಿ ಡಿಪೋಗಳಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್ ಆರಂಭಿಸಲು ಸಾರಿಗೆ ಇಲಾಖೆ ಸಿದ್ಧತೆ ಕೈಗೊಂಡಿದೆ. 60 ಬಸ್‌ಗಳು ಬಂದಿವೆ: ಶಕ್ತಿ ಯೋಜನೆ ಪರಿಣಾಮ ಮೈಸೂರಿಗೆ ಆಗಮಿಸುವ ಪ್ರಯಾಣಿಕರ ಸಂಖ್ಯೆ ನಿತ್ಯವೂ ಹೆಚ್ಚಾಗುತ್ತಿದೆ. ಇದರಿಂದ ಬಸ್‌ಗಳ ಕೊರತೆ ಉಂಟಾಗಿತ್ತು. ಇದೀಗ ರಾಜ್ಯ ಸರ್ಕಾರ 60 ಬಸ್‌ಗಳನ್ನು ನೀಡಿದೆ. ಇದರಿಂದ ನಗರದಲ್ಲಿ ಬಸ್‌ಗಳ ಕೊರತೆ ನೀಗಿದೆ. ನಗರ ಸಂಚಾರ ವ್ಯವಸ್ಥೆ ಸುಗಮವಾಗಲು ಇವು ಪೂರಕವಾಗಿವೆ.
ಎಲೆಕ್ಟ್ರಿಕ್ ಬಸ್‌ಗಳು ನಗರಕ್ಕೆ ಬಂದ ಕೂಡಲೇ ಮೊದಲಿಗೆ ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವಾದ ಚಾಮುಂಡಿಬೆಟ್ಟದ ಮಾರ್ಗಕ್ಕೆ ಸಂಚಾರ ಮಾಡಲು ಅನುವು ಮಾಡಿಕೊಡಲು ಕೆಎಸ್‌ಆರ್‌ಟಿಸಿ ತೀರ್ಮಾನಿಸಿದೆ.ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ನೆಲೆಸಿರುವ ಚಾಮುಂಡಿಬೆಟ್ಟಕ್ಕೆ ರಾಜ್ಯವಷ್ಟೇ ಅಲ್ಲ, ದೇಶ, ವಿದೇಶ ಗಳಿಂದಲೂ ಜನರು ಆಗಮಿಸುತ್ತಾರೆ. ಕೇಂದ್ರದ ಪ್ರಸಾದ್ ಯೋಜನೆಯಡಿ ಬೆಟ್ಟದ ಅಭಿವೃದ್ಧಿಗೆ ಈಗಾಗಲೇ 45.70 ಕೋಟಿ ರೂ. ಅನುದಾನ ಮಂಜೂರಾಗಿದೆ. ಅಲ್ಲದೆ, ರಾಜ್ಯ ಸರ್ಕಾರ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದೆ. ಪ್ರಸ್ತುತ ಚಾಮುಂಡಿಬೆಟ್ಟದ ಮೇಲೆ ನಗರೀಕರಣದ ಪರಿಣಾಮ ದಟ್ಟಣೆ, ಒತ್ತಡ ಹೆಚ್ಚಾಗಿದೆ. ಮಳೆಗಾಲದಲ್ಲಂತೂ ಬಂಡೆ, ರಸ್ತೆ ಕುಸಿಯುವ ಘಟನೆಯೂ ನಡೆದಿರುವುದು ಆತಂಕ ಮೂಡಿಸಿದೆ. ಈ ನಡುವೆ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಯೋಜನೆಯೂ ಬೇಡ ಎಂದು ಪರಿಸರ ಆಸಕ್ತರು ಆಗ್ರಹಿಸಿದ್ದಾರೆ.
ದೇವಿಯ ದರ್ಶನಕ್ಕಾಗಿ ಬರುವ ಲಕ್ಷಾಂತರ ಭಕ್ತರ ಒತ್ತಡ ಮತ್ತು ಪಾರ್ಕಿಂಗ್ ಸಮಸ್ಯೆ ನಿರ್ವಹಣೆ ದೃಷ್ಟಿಯಿಂದ ಚಾಮುಂಡಿಬೆಟ್ಟಕ್ಕೆ ಎಲ್ಲ ಬಗೆಯ ವಾಹನಗಳ ಪ್ರವೇಶ ನಿರ್ಬಂಧಿಸಲು ಜಿಲ್ಲಾಡಳಿತ ಮತ್ತು ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಚಿಂತನೆ ನಡೆಸಿದೆ.
ಚಾಮುಂಡಿ ಬೆಟ್ಟಕ್ಕೆ ಎಲ್ಲ ಮಾದರಿಯ ವಾಹನಗಳ ನಿರ್ಬಂಧ ವಿಧಿಸಿ ಬೆಟ್ಟದ ತಪ್ಪಲಿನಲ್ಲಿ ಪಾರ್ಕಿಂಗ್ ಸ್ಥಳ ನಿಗದಿ ಮಾಡಿ ಪಾರ್ಕಿಂಗ್ ಸ್ಥಳದಿಂದಲೇ ಭಕ್ತರು, ಸಾರ್ವಜನಿಕ ಸಾರಿಗೆ ಮೂಲಕ ಕರೆ ತರಲು ಜಿಲ್ಲಾಡಳಿತ ಹಾಗೂ ಪ್ರಾಧಿಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಸಂಬಂಧ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಸಂಬಂಧ ಜಿಲ್ಲಾಡಳಿತ ಪ್ರಾಧಿಕಾರ ನಿರ್ಧಾರವನ್ನು ಕೆಲ ಭಕ್ತರು ಸ್ವಾಗತಿಸಿದರೆ, ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಪೆಟ್ರೋಲ್, ಡೀಸೆಲ್ ಬಸ್‌ಗಳನ್ನು ಕೈಬಿಟ್ಟು ಮಾಲಿನ್ಯರಹಿತ ಎಲೆಕ್ಟ್ರಿಕ್ ಬಸ್‌ಗಳನ್ನು ಬೆಟ್ಟಕ್ಕೆ ಬಿಡಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ. ಇದು ಸಾಕಾರಗೊಂಡರೆ ಬೆಟ್ಟವನ್ನು ಪರಿಸರ ಸೂಕ್ಷ್ಮವಲಯವಾಗಿ ಉಳಿಸಲು ಸಾಧ್ಯವಾಗುತ್ತದೆ ಎನ್ನಲಾಗಿದೆ.
ಎಲ್ಲೆಲ್ಲಿ ಸಂಚಾರ?
* ಚಾಮುಂಡಿಬೆಟ್ಟ
*ಎಲ್ ಆ್ಯಂಡ್ ಟಿ, ಇನ್ಫೋಸಿಸ್
*ಲಿಂಗಾಂಬುಧಿ ಕೆರೆ ಸೇರಿದಂತೆ ನಗರದ ವಿವಿಧೆಡೆ
ಮೈಸೂರು ನಗರಕ್ಕೆ 200 ಎಲೆಕ್ಟ್ರಿಕ್ ಬಸ್‌ಗಳನ್ನು ನೀಡುವಂತೆ ಕೇಂದ್ರ ಕಚೇರಿಯಿಂದ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಇದು ದೊರೆತರೆ ಚಾಮುಂಡಿಬೆಟ್ಟ, ಇನ್ಫೋಸಿಸ್ ಸೇರಿದಂತೆ ನಗರದ ಇತರ ಕಡೆ ಎಲೆಕ್ಟ್ರಿಕ್ ಬಸ್‌ಗಳು ಸಂಚರಿಸಲಿವೆ. ಒಂದು ವರ್ಷದೊಳಗೆ ಎಲೆಕ್ಟ್ರಿಕ್ ಬಸ್‌ಗಳು ನಗರಕ್ಕೆ ಬರುವ ಸಾಧ್ಯತೆ ಇದೆ. ಎಚ್.ಟಿ.ವೀರೇಶ್ ಕೆಎಸ್‌ಆರ್‌ಟಿಸಿ ನಗರ ವಿಭಾಗೀಯ ನಿಯಂತ್ರಣಾಧಿಕಾರಿ. ನಮ್ಮ ಮೈಸೂರು ಬೃಹತ್ ನಗರವಾಗಿ ಬೆಳೆಯುತ್ತಿದೆ. ವಾಹನಗಳ ಓಡಾಟವೂ ಹೆಚ್ಚಾಗಿದೆ. ನಗರಕ್ಕೆ ಎಲೆಕ್ಟ್ರಿಕ್ ಬಸ್‌ಗಳು ಅವಶ್ಯಕತೆ ಇದೆ. ಇದರಿಂದ ಪೆಟ್ರೋಲ್, ಡೀಸೆಲ್ ವಾಹನಗಳಿಗೆ ಬ್ರೇಕ್ ಬೀಳಲಿದೆ. ನಮ್ಮ ನಗರದಲ್ಲಿ ಪರಿಸರ ಮಾಲಿನ್ಯ ಆಗುವುದನ್ನು ಕಡಿಮೆ ಮಾಡಬಹುದಾಗಿದೆ. ಸರ್ಕಾರ ಪರಿಸರ ಸ್ನೇಹಿ ಯೋಜನೆಗಳನ್ನು ಹೆಚ್ಚು ಹೆಚ್ಚು ಜಾರಿ ಮಾಡಬೇಕು. ಗಿರೀಶ್ ಗೌಡ ಸಾರ್ವಜನಿಕ