

ಅವಿನಾಶ್ ಜೈನಹಳ್ಳಿ ಮೈಸೂರು
ಜಿಲ್ಲೆಯಲ್ಲಿ ಈಗಾಗಲೇ ತಾಪಮಾನ ಹೆಚ್ಚಾಗಿದ್ದು, ಈ ಮಧ್ಯೆ ‘ಬಡವರ ಫ್ರಿಡ್ಜ್’ ಎಂದೇ ಕರೆಯಲಾಗುವ, ಪರಿಸರಕ್ಕೆ ಮಾರಕವಲ್ಲದ ಮಣ್ಣಿನ ಮಡಕೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಬಿಸಿಲಿನ ಬೇಗೆ ತಾಳಲಾರದೆ ದಣಿವು ನೀಗಿಸಿಕೊಳ್ಳಲು ಜನರು ತಂಪು ಪಾನೀಯ ಮತ್ತು ತಾಜಾ ಹಣ್ಣುಗಳ ಸೇವನೆಯತ್ತ ಮುಖ ಮಾಡಿದ್ದಾರೆ. ಜತೆಗೆ ಸದಾ ತಂಪಾಗಿರುವ ಮಡಕೆ ನೀರು ಕುಡಿಯಲು ಎಲ್ಲರೂ ಹಾತೊರೆಯುತ್ತಿದ್ದು, ಸಾರ್ವಜನಿಕರು ಮಡಕೆ ಖರೀದಿಗೆ ಮುಗಿಬೀಳುತ್ತಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಿಸಿಲಿನ ತಾಪ ಹೆಚ್ಚಾಗಿಯೇ ಇದೆ. ಈಗಾಗಲೇ ನಗರದ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿದೆ. ಮುಂದಿನ ವಾರಕ್ಕೆ ತಾಪಮಾನ ಪ್ರಮಾಣ 37 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗುವ ಮುನ್ಸೂಚನೆ ನೀಡಲಾಗಿದೆ. ಸದ್ಯ ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ಹೊರಗಡೆ ಓಡಾಡುವುದೇ ಕಷ್ಟವಾಗುತ್ತಿದೆ. ಒಂದಷ್ಟು ದೂರ ಹೆಜ್ಜೆ ಹಾಕಿದರೂ ಇಡೀ ದೇಹ ಸೊರಗಿ, ದಾಹ ಶುರುವಾಗುತ್ತಿದೆ. ಆದ್ದರಿಂದ ಎಲ್ಲರೂ ಹೊಟ್ಟೆ ತಂಪಾಗಿರಿಸಲು ಚಡಪಡಿಸುತ್ತಿದ್ದಾರೆ. ನಗರದ ಯಾವುದೇ ಮೂಲೆಯಲ್ಲಿ ತಂಪು ಪಾನೀಯ, ಹಣ್ಣು ಸಿಕ್ಕರೆ ಸೇವಿಸಿಬಿಡುವ ತವಕ ಉಂಟಾಗುತ್ತಿದೆ. ಎಲ್ಲಕ್ಕಿಂತ ಹಿತವಾದ ಅನುಭವ ನೀಡುವ ಮಡಕೆ ನೀರು ಕುಡಿಯುವ ಬಯಕೆ ಹೆಚ್ಚಾಗುತ್ತಿದೆ ಎನ್ನುತ್ತಾರೆ ಜನರು.
ಇನ್ನು ಏಪ್ರಿಲ್, ಮೇ ತಿಂಗಳಲ್ಲಿ ತಾಪಮಾನ ಮತ್ತಷ್ಟು ಹೆಚ್ಚುವ ಲಕ್ಷಣಗಳು ಈಗಲೇ ಗೋಚರಿಸಿವೆ. ಅವಧಿಗೂ ಮುನ್ನವೇ ಸೂರ್ಯ ಕೆಂಡದಂತಹ ಶಾಖ ಚೆಲ್ಲುತ್ತಿದ್ದು, ಜನರು ದೈಹಿಕವಾಗಿ ಬಸವಳಿಯುವಂತಾಗಿದೆ. ಅಷ್ಟರ ಮಟ್ಟಿಗೆ ಬೇಸಿಗೆಯ ಕಾವು ಏರತೊಡಗಿದೆ.
ಮಣ್ಣಿನ ಮಡಕೆ ಅನಾದಿ ಕಾಲದಿಂದಲೂ ಬಡವರ ಪಾಲಿನ ‘ಫ್ರಿಡ್ಜ್’ ಆಗಿಯೇ ಉಳಿದಿದೆ. ಈಗಲೂ ಗ್ರಾಮೀಣ ಪ್ರದೇಶದಲ್ಲಿ ಕೆಲವರು ಅಡುಗೆ ಮಾಡಲು ಮಡಕೆಗಳನ್ನು ಬಳಸುತ್ತಿದ್ದಾರೆ. ಮಡಕೆಯಲ್ಲಿಟ್ಟ ನೀರು ಯಾವಾಗಲೂ ತಂಪಾಗಿರುತ್ತದೆ. ಹೀಗಾಗಿ ಬೇಸಿಗೆ ಕಾಲ ಬಂದಾಗ ಎಲ್ಲರೂ ಮಡಕೆ ಕಡೆ ವಾಲುತ್ತಾರೆ. ಅಂತೆಯೇ, ನಗರದ ಕುಕ್ಕರಹಳ್ಳಿ ಕೆರೆಯ ಸಿಗ್ನಲ್ ಬಳಿ, ಬೆಂಗಳೂರು ರಸ್ತೆ, ಹುಣಸೂರು ರಸ್ತೆ ಸೇರಿದಂತೆ ನಗರದ ಅನೇಕ ಕಡೆ ಮಡಕೆ ವ್ಯಾಪಾರ ಜೋರಾಗಿ ನಡೆಯುತ್ತಿದ್ದು, ಖರೀದಿಗಾಗಿ ಗ್ರಾಹಕರು ಉತ್ಸಾಹ ತೋರುತ್ತಿದ್ದಾರೆ.
ಮುಖ್ಯವಾಗಿ, ಕುಕ್ಕರಹಳ್ಳಿ ಬಡಾವಣೆಯ ಬಳಿ ಮಾರಾಟಕ್ಕಿಟ್ಟಿರುವ ಮಡಕೆಗಳು ಬಣ್ಣ, ವಿನ್ಯಾಸ ಮತ್ತು ಕಲಾತ್ಮಕ ಚಿತ್ರಗಳ ಮೂಲಕ ಜನರನ್ನು ಸೆಳೆಯುತ್ತಿವೆ. ಜತೆಗೆ ಈ ಮಡಕೆಗಳತ್ತ ಜನರನ್ನು ಆಕರ್ಷಿಸಲು ಪಾರಂಪರಿಕ ಕಲಾ ಸ್ಪರ್ಶ ನೀಡಲಾಗಿದೆ. ಮಡಕೆಗಳಿಗೆ ನಲ್ಲಿ ಮತ್ತು ಸುರಕ್ಷಿತ ಸ್ಟಾೃಂಡ್‌ಗಳನ್ನು ಅಳವಡಿಸಲಾಗಿದೆ. ಇಲ್ಲಿ 5 ಲೀಟರ್‌ನಿಂದ ಹಿಡಿದು 20 ಲೀಟರ್ ನೀರು ಸಂಗ್ರಹ ಸಾಮರ್ಥ್ಯವುಳ್ಳ ಮಡಕೆಗಳನ್ನು ಮಾರಾಟಕ್ಕಿಡಲಾಗಿದೆ. ಒಂದೊಂದು ಆಕಾರದ ಮಡಕೆಗಳಿಗೂ ಒಂದೊಂದು ಬೆಲೆ ನಿಗದಿ ಮಾಡಲಾಗಿದೆ.
ಈ ಹಿಂದೆ ಮಡಕೆಯಿಲ್ಲದೆ ಮಾನವನ ಬದುಕಿಲ್ಲ ಅನ್ನುವಷ್ಟು ಜನಜೀವನದೊಂದಿಗೆ ಬೆಸೆದುಹೋಗಿತ್ತು. ಆದರೆ ಈಗ ಆಧುನಿಕ ರೀತಿಯಲ್ಲಿ ಲೋಹದ ಪಾತ್ರೆಗಳು ಅಡುಗೆ ಮನೆಗಳನ್ನು ಆವರಿಸಿದ್ದು, ಮಣ್ಣಿನ ಮಡಕೆಗಳೂ ತೀರಾ ಅಪರೂಪವಾಗಿವೆ. ಆಧುನಿಕತೆಯ ಭರಾಟೆಯಲ್ಲಿ ಸ್ಟೀಲ್, ಅಲ್ಯೂಮಿನಿಯಂ, ಪ್ಲಾಸ್ಟಿಕ್, ಫೈಬರ್ ವಸ್ತುಗಳು ಬಂದು ಮಡಕೆಗಳು ಬಹುತೇಕ ಮಾಯವಾಗಿವೆ. ಇದರಿಂದ ಕುಂಬಾರರು ಆತಂಕದ ನಡುವೆಯೇ ವೃತ್ತಿ ಸಾಗಿಸುತ್ತಿದ್ದರು. ಆದರೆ ಈಗ ಪ್ರಸಕ್ತ ಬೇಸಿಗೆಯ ಬಿಸಿಲಿನ ತಾಪ ವಿಪರೀತ ಹೆಚ್ಚಿದ್ದರಿಂದ ಜನತೆ ಅನಿವಾರ್ಯವಾಗಿ ಮಡಕೆಯ ಮೊರೆ ಹೋಗುತ್ತಿದ್ದು, ಮಾರಾಟದಲ್ಲಿ ಚೇತರಿಕೆ ಕಂಡು ಅವರಲ್ಲಿ ಸ್ವಲ್ಪ ಪ್ರಮಾಣದ ನೆಮ್ಮದಿ ಕಾಣುತ್ತಿದೆ. ಮಹಾಮಾರಿ ಕರೊನಾ ವೈರಸ್ ಹಾಗೂ ಬೇಸಿಗೆಯ ಮಡಕೆ ವ್ಯಾಪಾರದ ಸಮಯದಲ್ಲಿ ಅಕಾಲಿಕ ಮಳೆಯಿಂದ ಕಂಗಾಲಾಗಿದ್ದ ಮಡಕೆ ವ್ಯಾಪಾರಿಗಳ ಮುಖದಲ್ಲಿ ಈ ಬಾರಿ ಸಂತಸದ ಗೆರೆಗಳು ಮೂಡಲಾರಂಭಿಸಿವೆ. ಈ ವರ್ಷ ಬಿಸಿಲಿನ ತಾಪ ಹೆಚ್ಚಿದಂತೆ ಮಣ್ಣಿನ ಮಡಕೆಗೆ ಬೇಡಿಕೆ ಹೆಚ್ಚುತ್ತಿದೆ. ಈ ಬಾರಿ ಕುಂಬಾರರು ಜೇಬು ತುಂಬಿಸಿಕೊಳ್ಳುವ ಆಶಾಭಾವದಲ್ಲಿದ್ದಾರೆ.
ಇಲ್ಲಿನ ವ್ಯಾಪಾರಿ ಮುನ್ನಾರಾಮ್, ಗುಜರಾತ್‌ನಿಂದ ಎರಡು ಲೋಡ್ ಮಡಕೆ ತರಿಸಿದ್ದಾರೆ. ‘ಒಂದು ಲೋಡ್‌ನಲ್ಲಿ ಸುಮಾರು 1 ಸಾವಿರ ಮಡಕೆಗಳು ಬರುತ್ತವೆ. ಲೋಡ್‌ಗೆ 25 ರಿಂದ 30 ಸಾವಿರ ರೂ. ಸಾರಿಗೆ ವೆಚ್ಚವಾಗುತ್ತದೆ. ಇನ್ನು ಸಾಗಣೆ ವೇಳೆ ಅನೇಕ ಮಡಕೆಗಳು ಒಡೆದು ನಷ್ಟವಾಗುತ್ತದೆ. ಜತೆಗೆ ವ್ಯಾಪಾರದ ಜಾಗದಲ್ಲೂ ಕೈಜಾರಿ ಕೆಲವೊಂದು ಮಡಕೆಗಳು ಒಡೆದು ಹೋಗುತ್ತವೆ. ಚಳಿಗಾಲ ಮತ್ತು ಮಳೆಗಾಲದಲ್ಲಿ ಒಂದೂ ಮಡಕೆ ವ್ಯಾಪಾರವಾಗದಿದ್ದರೂ, ಬೇಸಿಗೆಯಲ್ಲಿ ಒಳ್ಳೆಯ ವ್ಯಾಪಾರವಾಗುತ್ತದೆ. ಈ ಬಾರಿ ಈಗಾಗಲೇ ತಕ್ಕ ಮಟ್ಟಿಗೆ ವ್ಯಾಪಾರ ಶುರುವಾಗಿದೆ ಎಂದು ಸಮಾಧಾನ ತೋಡಿಕೊಳ್ಳುತ್ತಾರೆ.
ಮಡಕೆಯಲ್ಲಿ ನೀರು ಕುಡಿದರೆ ಶೀತ, ಕೆಮ್ಮು ಬರುವುದಿಲ್ಲ. ನಾವು ಚಿಕ್ಕ ವಯಸ್ಸಿನಿಂದ ಮಡಕೆ ನೀರು ಕುಡಿಯುತ್ತೇನೆ. ನಾವು ಮಡಕೆಯಲ್ಲಿ ಸಂಗ್ರಹಿಸಿಟ್ಟ ನೀರು ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೂ ಒಳ್ಳೆಯದು. ಅಲ್ಲದೆ ಕುಂಬಾರರ ಜೀವನವೂ ಉತ್ತಮವಾಗಿ ನಡೆಯುತ್ತದೆ. ಜನರು ಮಣ್ಣಿನ ಮಡಕೆ ಖರೀದಿಸಿ ಬಳಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು. ಇದರೊಂದಿಗೆ ನೇಪಥ್ಯಕ್ಕೆ ಸರಿಯುತ್ತಿರುವ ಕುಂಬಾರಿಕೆ ವೃತ್ತಿಯನ್ನು ಆ ಮೂಲಕ ಪ್ರೋತ್ಸಾಹಿಸಿದಂತಾಗುತ್ತದೆ’ ಎಂದು ಮಡಕೆ ಖರೀದಿ ಮಾಡಿದ ಮಹಿಳೆಯೊಬ್ಬರು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಕೆಲವು ವರ್ಷಗಳಿಂದ ಒಂದಿಲ್ಲೊಂದು ರೀತಿಯ ಸಮಸ್ಯೆ ಎದುರಾಗಿ ವ್ಯಾಪಾರ ನಡೆದಿಲ್ಲ, ನಾವು ದೂರದಿಂದ ಮಡಕೆ ತಂದು ಮಾರಾಟ ಮಾಡುತ್ತೇವೆ. ಈ ಬಾರಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಮಡಕೆ ವ್ಯಾಪಾರ ಹೆಚ್ಚಾಗಲಿದೆ ಎನ್ನುವ ನಿರೀಕ್ಷೆ ಇದೆ. ಈಗಾಗಲೇ ವ್ಯಾಪಾರ ಚೇತರಿಕೆಯ ಹಾದಿಯಲ್ಲಿದೆ.-ಮುನ್ನಾರಾಮ್, ಮಡಕೆ ವ್ಯಾಪಾರಿ