

ಜೊಯಿಡಾ: ಗಣೇಶಗುಡಿ ಕರ್ನಾಟಕ ವಿದ್ಯುತ್ ನಿಗಮದ ಗುತ್ತಿಗೆ ಕಾರ್ವಿುಕರಿಗೆ ರಾಯಚೂರಿನ ಬನಶಂಕರಿ ಇಲೆಕ್ಟ್ರಿಕಲ್ ಏಜೆನ್ಸಿ ಮತ್ತು ಕೆಪಿಸಿಎಲ್ ಅಧಿಕಾರಿಗಳು ಹೆಚ್ಚುವರಿ ವೇತನ (ರಿವೈಜ್ ಪೇಮೆಂಟ್), ಇಎಸ್ಐ, ಪಿಎಫ್ ಹಾಗೂ ಇತರ ಸೌಲಭ್ಯ ನೀಡಲು ವಿಳಂಬ ಮಾಡುತ್ತಿದ್ದಾರೆ. ಇದನ್ನು ವಿರೋಧಿಸಿ ಜೊಯಿಡಾದಲ್ಲಿ ಕಾಳಿ ಬ್ರಿಗೇಡ್ ಸಂಘಟನೆ ಮುಖ್ಯ ಸಂಚಾಲಕ ಸುನೀಲ ದೇಸಾಯಿ ನೇತೃತ್ವದಲ್ಲಿ ತಹಸೀಲ್ದಾರ್ ರಾಜೇಶ ಚೌಹಾಣ ಮೂಲಕ ಮುಖ್ಯಮಂತ್ರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಬನಶಂಕರಿ ಇಲೆಕ್ಟ್ರಿಕಲ್ ರಾಯಚೂರು ಹೆಸರಿನ ಏಜೆನ್ಸಿ ಅಡಿಯಲ್ಲಿ ಗುತ್ತಿಗೆ ಕಾರ್ವಿುಕರಾಗಿ 1 ವರ್ಷಕ್ಕಿಂತ ಅಧಿಕ ಸಮಯದಿಂದ ಸ್ಥಳೀಯರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಅವಧಿಯಲ್ಲಿ ಇಎಸ್ಐ ಮತ್ತು ಪಿಎಫ್ ವಂತಿಗೆಯನ್ನು ಕಾರ್ವಿುಕರ ವೇತನದಿಂದ ಕಡಿತಗೊಳಿಸಲಾಗಿದೆ. ಆದರೆ, ಅದನ್ನು ಏಜೆನ್ಸಿಯವರು ಸಂಬಂಧಪಟ್ಟ ಕಚೇರಿಗೆ ಪಾವತಿಸಿಲ್ಲ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಗುತ್ತಿಗೆ ಕಾರ್ವಿುಕರಿಗೆ ರಿವೈಸ್ ಪೇಮೆಂಟ್ ನೀಡಬೇಕೆಂದು ಸರ್ಕಾರ ಆದೇಶ ಮಾಡಿದ್ದರೂ ಈವರೆಗೆ ಕಾರ್ವಿುಕರಿಗೆ ನೀಡಿಲ್ಲ. ಈ ಬಗ್ಗೆ ಕಳೆದ 12 ದಿನಗಳಿಂದ ಕಾರ್ವಿುಕರು ಗಣೇಶಗುಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಹೋರಾಟಕ್ಕೆ ಸ್ಪಂದಿಸದೇ ಅದನ್ನು ಹತ್ತಿಕ್ಕಲು ಅಧಿಕಾರಿಗಳು ಯತ್ನಿಸುತ್ತಿದ್ದಾರೆ. ಕದ್ರಾ ಮತ್ತು ಅಂಬಿಕಾನಗರದ ಕಾರ್ವಿುಕರೂ ಇದೇ ರೀತಿ ಹೋರಾಟ ಮಾಡುತ್ತಿದ್ದಾರೆ. ಕಾರ್ವಿುಕರ ಸಮಸ್ಯೆ ಬಗೆಹರಿಸುವಂತೆ ಕಾರವಾರ ಜಿಲ್ಲಾಧಿಕಾರಿಗಳು ಏಜೆನ್ಸಿ ಮತ್ತು ಕೆಪಿಸಿಎಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಅಧಿಕಾರಿಗಳು ಲಿಖಿತವಾಗಿ ತಿಳಿಸಿದ್ದರು. ಆದರೆ, ಈವರೆಗೆ ಸಮಸ್ಯೆ ಬಗೆಹರಿಸಿಲ್ಲ ಎಂದು ದೂರಿದ್ದಾರೆ.
ಕಾಳಿ ಬ್ರಿಗೇಡ್ ಸಂಘಟನೆ ಮುಖ್ಯ ಸಂಚಾಲಕ ಸುನೀಲ ದೇಸಾಯಿ, ಮುಖ್ಯ ಸಮಿತಿ ಮಾಜಿ ಅಧ್ಯಕ್ಷ ಸತೀಶ ನಾಯ್ಕ, ಕಾರ್ಯದರ್ಶಿ ಸಮೀರ ಮುಜಾವರ, ಪ್ರಭಾಕರ ನಾಯ್ಕ, ನಾರಾಯಣ ಹೆಬ್ಬಾರ, ವಿನಾಯಕ ಕರಂಜೋಳಕರ, ಬಸವಣ್ಣಯ್ಯ ಹಿರೇಮಠ, ಸೀಮಾವ ವೇಗಸ, ಓಂಕಾರ ಟೇಂಗ್ಸೆ, ದಿನೇಶ ದೇಸಾಯಿ, ಭವಾನಿ ಚೌಹಾಣ, ಕವಿತಾ ರೇವಣಕರ, ಸೋನಿಯಾ ಘೊಟ್ಗೆ, ದೇವಿದಾಸ ವೇಳಿಪ, ಅವಿನಾಶ, ಕೃಷ್ಣಾ ದೇಸಾಯಿ, ಈಶ್ವರಿ ದೇಸಾಯಿ, ಮಂಜುನಾಥ ಕೆ., ಸಂತೋಷ ಡಿ., ಮಂಜುನಾಥ ಎ., ಗೋಕುಲದಾಸ್ ನಾಯ್ಕ, ಕಾಳಿ ಬ್ರಿಗೇಡ್ ಕಾರ್ಯಕರ್ತರು ಮತ್ತು ಸಾರ್ವಜನಿಕರು ಇದ್ದರು.