

ಹನೂರು: ಮಲೆಮಹದೇಶ್ವರ ಬೆಟ್ಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆಯಬೇಕಿದ್ದ ಸಚಿವ ಸಂಪುಟ ಸಭೆ ಪದೇ ಪದೇ ಮುಂದೂಡುತ್ತಿರುವುದು ಕ್ಷೇತ್ರದ ಜನರಲ್ಲಿ ಬೇಸರ ತರಿಸಿದೆ.
ಅಸಂಖ್ಯಾತ ಭಕ್ತರ ನೆಚ್ಚಿನ ತಾಣ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಕ್ಯಾಬಿನೆಟ್ ಸಭೆ ನಡೆಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್ ತಿಂಗಳಲ್ಲೇ ಸಚಿವರಿಗೆ ಸೂಚನೆ ನೀಡಿದ್ದರು. ಹಾಗಾಗಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹಾಗೂ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದುಕೊಂಡು ಸಭೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದರು.
ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್ ಹಾಗೂ ಶಾಸಕ ಎಂ.ಆರ್ ಮಂಜುನಾಥ್ ಅವರು ಮ.ಬೆಟ್ಟದಲ್ಲಿ ಸಭೆ ನಡೆಸಿ ಸಿದ್ಧತೆ ನಡೆಸಲು ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದರು. ಅಲ್ಲದೇ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಪ್ರಾಧಿಕಾರದ ಅಧ್ಯಕ್ಷರೂ ಆದ ಸಿಎಂ ಸಿದ್ದರಾಮಯ್ಯ ಅವರಿಂದ ಉದ್ಘಾಟನೆಯಾಗಲಿರುವ ಕಾಮಗಾರಿಗಳ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ ಉದ್ಘಾಟನೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದರು. ಈ ವೇಳೆ ಸಭೆಯು ಜನವರಿ 6 ರಂದು ನಡೆಯುವುದಾಗಿ ತಿಳಿದು ಬಂದಿತ್ತು. ಕಾರಣಾಂತರದಿಂದ ಫೆ.13ಕ್ಕೆ ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ ಫೆ.13, 14 ರಂದು ಬೆಂಗಳೂರಿನಲ್ಲಿ ಗ್ಲೋಬಲ್ ಇನ್ವೆಸ್ಟ್‌ಮೆಂಟ್ ಮೀಟ್ ಇದ್ದ ಕಾರಣ ಸಭೆ 15ಕ್ಕೆ ನಿಗದಿಪಡಿಸಲಾಗಿತ್ತು. ಬಳಿಕ ಫೆ.17 ರಂದು ಸಭೆ ನಡೆಯುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ತಿಳಿಸಿ, ಜಿಲ್ಲಾ ಪಂಚಾಯಿತಿ ಕೆಡಿಪಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಅಧಿಕಾರಿಗಳ ಸಭೆಯಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಸೂಚಿಸಿದ್ದರು.
ಮ.ಬೆಟ್ಟದ ದೀಪದಗಿರಿ ಒಡ್ಡುವಿನ 108 ಅಡಿ ಎತ್ತರದ ಶ್ರೀ ಮಹದೇಶ್ವರ ಸ್ವಾಮಿಯ ಪ್ರತಿಮೆಯ ಆವರಣದಲ್ಲಿ ಸಭೆ ನಡೆಯಲು ನಿರ್ಧರಿಸಲಾಗಿದ್ದು, ಈಗಾಗಲೇ ಭೂಮಿ ಸಮತಟ್ಟು ಮಾಡಲಾಗಿದೆ. ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್ ಅವರು ವಸತಿ ಸಮಿತಿ, ಶಿಷ್ಟಾಚಾರ, ಸ್ವಾಗತ, ಆಹಾರ, ಕುಡಿಯುವ ನೀರು, ಭದ್ರತೆ, ಆರೋಗ್ಯ, ಸಮನ್ವಯ, ಮಾಹಿತಿ ಮತ್ತು ತಂತ್ರಜ್ಞಾನ ಸಮಿತಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ 19 ಸಮಿತಿ ರಚಿಸಿ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗಿದೆ. ಜ.23 ರಂದು ಸರ್ಕಾರದ ಅಪರ ಕಾರ್ಯದರ್ಶಿ ಚಂದ್ರಶೇಖರ್ ಅವರು ಮ.ಬೆಟ್ಟಕ್ಕೆ ಭೇಟಿ ನೀಡಿ ಸಭೆ ನಡೆಯುವ ಸ್ಥಳವನ್ನು ಪರಿಶೀಲಿಸಿದ್ದರು.
ಶಾಸಕ ಎಂ.ಆರ್ ಮಂಜುನಾಥ್ ಕೂಡ ಪದೇ ಪದೆ ಮಲೆಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಸಿದ್ಧತೆ ಸಂಬಂಧ ಪರಿಶೀಲನೆ ನಡೆಸಿದ್ದರು. ಜತೆಗೆ ಪೂರ್ವಭಾವಿ ಸಭೆ ನಡೆಸಿದ್ದರು. ಇತ್ತ ಎಲ್ಲೇಮಾಳದಿಂದ ಮ.ಬೆಟ್ಟದವರೆಗೆ ಹಾಳಾಗಿದ್ದ ರಸ್ತೆಯನ್ನು ಮರು ಡಾಂಬರೀಕರಣಗೊಳಿಸಲಾಗಿದೆ. ಹಾಗಾಗಿ ಕ್ಷೇತ್ರದ ಜನರು ಫೆ.17 ರಂದು ಸಭೆ ನಡೆಯುವುದು ಖಚಿತ ಎಂಬ ವಿಶ್ವಾಸ ಹೊಂದಿದ್ದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನಾರೋಗ್ಯ ಹಿನ್ನೆಲೆಯಲ್ಲಿ ಸಭೆಯನ್ನು ಮತ್ತೆ ಮಂದೂಡಲಾಗಿದೆ ಎನ್ನಲಾಗಿದೆ.