ಚರಂಡಿ-ಹಳ್ಳದ ನೀರಿಗೂ ಬೇಡಿಕೆ

Tanker water
Published on

ಲಕ್ಷ್ಮೇಶ್ವರ: ಮಳೆ ಕೊರತೆಯಿಂದ ಒಣಗುತ್ತಿರುವ ಬೆಳೆ ರಕ್ಷಣೆಗೆ ರೈತರು ಟ್ಯಾಂಕರ್ ನೀರಿಗೆ ಮೊರೆ ಹೋಗಿದ್ದಾರೆ.

ಮಸಾರಿ ಭಾಗದ ಬೆಳೆಗಳು ಒಣಗಿದ್ದು, ಕಪ್ಪು ಮಣ್ಣಿನ ಜಮೀನಿನಲ್ಲಿ ಬೆಳೆಗಳು ಬಾಡಿವೆ. ಸಾವಿರಾರೂ ಖರ್ಚು ಮಾಡಿ ಬೆಳೆದಿರುವ ಶೇಂಗಾ, ಹತ್ತಿ, ಉಳ್ಳಾಗಡ್ಡಿ, ಮೆಣಸಿನಕಾಯಿ, ಹೆಸರು ಮತ್ತಿತರ ಬೆಳೆಗಳು ಬಿಸಿಲ ಹೊಡೆತಕ್ಕೆ ಕಮರುತ್ತಿವೆ. ಬೋರ್‌ವೆಲ್ ಮತ್ತು ಇತರ ನೀರಿನ ಮೂಲ ಇಲ್ಲದ ಕೆಲ ರೈತರು ಸಮೀಪದ ಚರಂಡಿ, ಹಳ್ಳದ ನೀರನ್ನು ಪಂಪ್‌ಸೆಟ್ ಮೂಲಕ ಬಳಸಿಕೊಳ್ಳುತ್ತಿದ್ದಾರೆ.

ಜುಲೈನಲ್ಲಿ ಸುರಿದ ಮಳೆಯಿಂದಾಗಿ 32,200 ಹೆಕ್ಟೇರ್ ಕ್ಷೇತ್ರದಲ್ಲಿ ಗೋವಿನಜೋಳ ಬಿತ್ತನೆಯಾಗಿದೆ. ತೇವಾಂಶದ ಕೊರತೆಯಿಂದ ಒಣಗುತ್ತಿದ್ದು, ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಮಾಡುತ್ತಿದ್ದಾರೆ.

ಪಟ್ಟಣದಿಂದ ನಿತ್ಯ ಚರಂಡಿ ಮೂಲಕ ಹರಿಯುವ ನೀರನ್ನು ಹಳ್ಳದ ಅಕ್ಕಪಕ್ಕದ ರೈತರು ಬೆಳೆಗೆ ಬಳಸಿಕೊಳ್ಳುತ್ತಿದ್ದಾರೆ. ತಾಲೂಕಿನ ಅಡರಕಟ್ಟಿ ಗ್ರಾಮದ ರೈತರಾದ ಎಂ.ಆರ್. ಹವಳದ ಅವರು ಟ್ಯಾಂಕರ್ ಮೂಲಕ ಗೋವಿನಜೋಳದ ಬೆಳೆಗೆ ನೀರುಣಿಸುತ್ತಿದ್ದಾರೆ. ಕೊಂಡಿಕೊಪ್ಪ ಹತ್ತಿರವಿರುವ ಅವರ ಜಮೀನಿನ ಹತ್ತಿರದ ಹಳ್ಳದಲ್ಲಿ ನಿಂತಿರುವ ನೀರನ್ನು 2 ಟ್ರ್ಯಾಕ್ಟರ್ ಟ್ಯಾಂಕರ್ ಮೂಲಕ ನೀರೆತ್ತಿ ತಂದು ಸ್ಪಿಂಕ್ಲರ್ ಮೂಲಕ ಬೆಳೆಗೆ ನೀರಿನ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ. ಕಳೆದ ಒಂದು ವಾರದಿಂದ ಈ ಕಾರ್ಯ ಆರಂಭಿಸಿರುವ ಅವರು ಈಗಾಗಲೇ 10 ಎಕರೆ ಬೆಳೆಗೆ ಪೊರೈಸಿ ಒಣಗುತ್ತಿರುವ ಬೆಳೆಗೆ ಜೀವಕಳೆ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಕೃಷಿಯನ್ನೇ ಬದುಕಾಗಿಸಿಕೊಂಡಿರುವ ರೈತರಿಗೆ ಮಳೆಯೇ ಆಧಾರ. ಆದರೆ, ಮಳೆ ಕೈಕೊಟ್ಟಿದ್ದರಿಂದ ಬೆಳೆ ಉಳಿಸಿಕೊಳ್ಳದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ. ಖರ್ಚು ಹೆಚ್ಚಾದರೂ ಸರಿ ಉತ್ತಮ ಬೆಲೆ ಸಿಕ್ಕರೆ ಪೂರ್ಣ ಪ್ರಮಾಣದ ನಷ್ಟದಿಂದ ತಪ್ಪಿಸಿಕೊಳ್ಳಬಹುದು. ಈ ಹಿಂದೆಯೂ ಒಣಗುತ್ತಿರುವ ಉಳ್ಳಾಗಡ್ಡಿ ಬೆಳೆಗೆ ಟ್ಯಾಂಕರ್ ನೀರು ಹಾಯಿಸಿ ನಷ್ಟದಿಂದ ಪಾರಾಗಿದ್ದೇನೆ. ಆದರೆ, ಎಲ್ಲ ರೈತರಿಗೂ ಇದು ಕಷ್ಟಸಾಧ್ಯ. ಸರ್ಕಾರ ತಾಲೂಕನ್ನು ಬರಪೀಡಿತ ಎಂದು ಘೋಷಿಸಿ ರೈತರ ಹಿತ ಕಾಪಾಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net