

ಬೆಳಗಾವಿ: ಅನ್ನಭಾಗ್ಯ ಯೋಜನೆಯಡಿ ರಾಜ್ಯದ ಪಡಿತರ ಚೀಟಿದಾರರಿಗೆ ಪೌಷ್ಟಿಕಾಂಶಯುಕ್ತ ದ್ವಿದಳ ಧಾನ್ಯಗಳು, ಎಣ್ಣೆ ಮತ್ತು ಬೆಲ್ಲವನ್ನು ವಿತರಣೆ ಮಾಡುವಂತೆ ಆಗ್ರಹಿಸಿ ಆಹಾರದ ಹಕ್ಕಿಗಾಗಿ ಆಂದೋಲನ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಶನಿವಾರ ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಬೆಳಗಾವಿ, ಕೊಪ್ಪಳ, ಯಾದಗಿರಿ, ರಾಯಚೂರು, ಕಲಬುರ್ಗಿ ಸೇರಿ 15 ಜಿಲ್ಲೆಗಳಲ್ಲಿ ಅಪೌಷ್ಟಿಕತೆ, ರಕ್ತ ಹೀನತೆಯಿಂದ ಮಕ್ಕಳು ಮತ್ತು ಮಹಿಳೆಯರ ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಯು ಕುಂಠಿತವಾಗಿರುವುದು ಹಲವಾರು ಸಮೀಕ್ಷೆಗಳಿಂದ ಹೊರಬಂದಿದೆ. ಹಾಗಾಗಿ 2022ರಲ್ಲಿ ಆರೋಗ್ಯ ಇಲಾಖೆಯು ಹೈಕೋರ್ಟಗೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಗಂಭೀರ ಸಮಸ್ಯೆಗಳಾದ ಅಪೌಷ್ಟಿಕತೆ ಮತ್ತು ಹಸಿವು ಬಗ್ಗೆ ಉಲ್ಲೇಖಿಸಿದೆ. ಇದಕ್ಕೆಲ್ಲ ಕಾರಣ ಆಹಾರದಲ್ಲಿ ಪೌಷ್ಟಿಕಾಂಶಗಳ ಕೊರತೆಯು ಪ್ರಮುಖವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು. ಕೇರಳ ರಾಜ್ಯವು ಸಾರವರ್ಧಿತ ಅಕ್ಕಿ ಕೂಡಲು ನಿರಾಕರಿಸಿದ್ದು, ಬದಲಿಗೆ ಸ್ಥಳೀಯ ಅಕ್ಕಿಯನ್ನೇ ಕೊಡಲು ಮುಂದಾಗಿದೆ. ಕರ್ನಾಟಕ ರಾಜ್ಯವೂ ಇದೇ ನಿರ್ಧಾರನ ಪ್ರಕಟಿಸಿ ಸಾರವರ್ಧಿತ ಅಕ್ಕಿಯ ಬದಲು ಜೋಳ, ರಾಗಿ ಮತ್ತು ಕಬ್ಬಿಣಾಂಶವುಳ್ಳ ಬೆಲ್ಲ ವಿತರಿಸಲು ಘೋಷಿಸುವಂತೆ ಒತ್ತಾಯಿಸಿದರು.
ಪರಿಸವಾದಿ ಶಿವಾಜಿ ಕಾಗಣಿಕರ್, ಸುವರ್ಣಾ ಕುಡಾಳೆ, ಮಹಾನಂದಾ ತಳವಾರ, ಶಾರದಾ ಗೋಪಾಲ, ಡಾ. ಗೋಪಾಲ ದಾಬಡೆ, ಅಡಿವೆಪ್ಪ ಕುಂಬರಗಿ ಇತರರಿದ್ದರು.