

ಬಂಗಾರಪೇಟೆ: ಮುಂಗಾರು ಮಳೆಯಿಂದ ನಷ್ಟವಾಗಿರುವ ಬೆಳೆ ಸಮೀಕ್ಷೆ ಮಾಡಲು ವಿಶೇಷ ತಂಡ ರಚನೆ ಮಾಡಿ ರೋಗ ನಿಯಂತ್ರಣಕ್ಕೆ ಗುಣಮಟ್ಟದ ಔಷಧ ವಿತರಿಸಿ, ನಷ್ಟವಾಗಿರುವ ಪ್ರತಿ ಎಕರೆಗೆ 2 ಲಕ್ಷ ರೂ. ಪರಿಹಾರ ನೀಡಬೇಕು. ಕೃಷಿ ಚಟುವಟಿಕೆಗೆ ಅವಶ್ಯವಿರುವ ಯೂರಿಯಾ, ಡಿಎಪಿಯನ್ನು ಯಾವುದೇ ಅಭಾವ ಸೃಷ್ಟಿಯಾಗದಂತೆ ವಿತರಣೆ ಮಾಡಬೇಕು ಎಂದು ರೈತ ಸಂಘದಿಂದ ತೋಟಗಾರಿಕೆ ಇಲಾಖೆ ಮುಂಭಾಗ ಪ್ರತಿಭಟಿಸಲಾಯಿತು.
ರೈತ ಸಂಘ ತಾಲೂಕು ಅಧ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ, 5 ವರ್ಷಗಳಿಂದ ವಾಣಿಜ್ಯ ಬೆಳೆಗಳಾದ ಟೊಮ್ಯಾಟೊ, ಹೂವು, ಕ್ಯಾಪ್ಸಿಕಂ ಬೆಳೆಗಳಿಗೆ ಬಾಧಿಸುತ್ತಿದ್ದ ರೋಗಗಳು ನಿಯಂತ್ರಣಕ್ಕೆ ಬಾರದೆ ಲಕ್ಷಾಂತರ ರೂ. ನಷ್ಟ ಅನುಭವಿಸುತ್ತಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇರುವಾಗಲೇ ಉತ್ತಮ ಸಲಿಗೆ ತೇವಾಂಶ ಹೆಚ್ಚಾಗಿ ಬೆಳೆಗಳಿಗೆ ರಾತ್ರೋ ರಾತ್ರಿ ಅಂಗಮಾರಿ, ಚುಕ್ಕೆ ರೋಗ ತಗಲುತ್ತಿದೆ. ಇದರಿಂದ ಹಾಕಿದ ಬಂಡವಾಳ ಕೈಗೆ ಸಿಗದೆ ಸಾಲದ ಸುಳಿಯಲ್ಲಿರುವ ರೈತರ ರಕ್ಷಣೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಮುಖಂಡ ಕದರಿನತ್ತ ಅಪ್ಪೋಜಿರಾವ್ ಮಾತನಾಡಿ, ಮುಂಗಾರು ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರಿಗೆ ಅವಶ್ಯವಿರುವ ಯೂರಿಯಾ ಹಾಗೂ ಡಿಎಪಿ ವಿತರಣೆ ಮಾಡುವಲ್ಲಿ ವಿಳಂಬವಾಗುತ್ತಿದೆ. ಖಾಸಗಿ ಕಂಪನಿ ಹಾಗೂ ಮಾರಾಟಗಾರರ ಜತೆ ಕೃಷಿ ಅಧಿಕಾರಿಗಳು ಶಾಮೀಲಾಗಿ ಕೃತಕ ಅಭಾವ ಸೃಷ್ಟಿ ಮಾಡಿ ರೈತರನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ತೋಟಗಾರಿಕೆ ಅಧಿಕಾರಿ ಶಿವ ಕುಮಾರಿ, ಮುಂಗಾರು ಮಳೆಯಿಂದ ನಷ್ಟವಾಗಿರುವ ಬೆಳೆ ಸಮೀಕ್ಷೆ ಮಾಡಲು ಅಧಿಕಾರಿಗಳಿಗೆ ಸೂಚನೆ ಮಾಡುವ ಜತೆಗೆ ರಸಗೊಬ್ಬರಗಳು ಕೊರತೆಯಾಗದಂತೆ ಜಾಗೃತಿ ವಹಿಸುವ ಭರವಸೆ ನೀಡಿದರು.
ಮುಖಂಡರಾದ ಚಾಂದ್ಪಾಷಾ, ಮುನಿರಾಜು, ಮುನಿಕೃಷ್ಣ, ಮೃಗೇಶ ವೆಂಕಟರಮಣಪ್ಪ, ಸಂತೋಷ್, ಲಕ್ಷಣ್, ಶೈಲಜಾ, ರಾಧಾ, ಚೌಡಮ್ಮ, ಶೋಭಾ, ಮಂಜುಳಾ ಇದ್ದರು.