

ವಿಜಯವಾಣಿ ಸುದ್ದಿಜಾಲ ಧಾರವಾಡ
ಖೊಟ್ಟಿ ಜಾತಿ ಪ್ರಮಾಣಪತ್ರ ನೀಡಿ ತಾಲೂಕಿನ ಮುಗದ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ರವಿ ಕಸಮಳಗಿ ಜಾತಿ ಪ್ರಮಾಣಪತ್ರ ರದ್ದಾಗಿದೆ. ಹೀಗಾಗಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಅನರ್ಹಗೊಳಿಸಿ ಹೊಸ ಅಧ್ಯಕ್ಷರ ಆಯ್ಕೆ ಮಾಡುವಂತೆ ಗ್ರಾಪಂ ಸದಸ್ಯ ಮಂಜುನಾಥ ಶೇರೆವಾಡ ಆಗ್ರಹಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 3 ಬಿ ಜೈನ್ ಜಾತಿ ಪ್ರಮಾಣಪತ್ರ ಪಡೆದಿದ್ದ ರವಿ, ಹಿಂದುಳಿದ ಅ ವರ್ಗಕ್ಕೆ ಮೀಸಲಾಗಿದ್ದ ಗ್ರಾಪಂ ಅಧ್ಯಕ್ಷ ಸ್ಥಾನದ ಗದ್ದುಗೆ ಹಿಡಿಯಲು ಹಿಂದೂ ಬೋಗಾರ ಪ್ರವರ್ಗ ಅ ವರ್ಗದ ಜಾತಿ ಪ್ರಮಾಣಪತ್ರ ಪಡೆದಿದ್ದರು. ಹೀಗಾಗಿ ಪ್ರಕರಣ ದಾಖಲಿಸಲಾಗಿತ್ತು. ಜಿಲ್ಲಾಧಿಕಾರಿ ವಿಚಾರಣೆ ನಡೆಸಿ ಜಾತಿ ಪ್ರಮಾಣಪತ್ರ ಖೊಟ್ಟಿ ಎಂದು ಆದೇಶ ಹೊರಡಿಸಿದ್ದಾರೆ ಎಂದರು.
ಪ್ರಕರಣ ದಾಖಲಿಸಿದಾಗ ಉಪವಿಭಾಗಾಧಿಕಾರಿ ಸೂಚನೆಯಂತೆ ತಹಸೀಲ್ದಾರ ಗ್ರೇಡ್ 2 ನ್ಯಾಯಾಲಯದಲ್ಲಿ ನಡೆಸಿದ ವಿಚಾರಣೆಯಲ್ಲಿ ಅಧ್ಯಕ್ಷರ ಪರ ಆದೇಶಿಸಲಾಗಿತ್ತು. ಅದನ್ನು ಪ್ರಶ್ನಿಸಿ ಉಪವಿಭಾಗಾಧಿಕಾರಿಗೆ ಸಲ್ಲಿಸಿದ ಮೇಲ್ಮನವಿ ವಿಚಾರಣೆಯಲ್ಲಿ ಜಾತಿ ಪ್ರಮಾಣ ತಪ್ಪಾಗಿದೆ. ರದ್ದು ಮಾಡಲಾಗಿದೆ ಎಂದು ಆದೇಶಿಸಿದ್ದರು. ಆದರೆ ಈ ಆದೇಶ ಪ್ರಶ್ನಿಸಿ ಗ್ರಾಪಂ ಅಧ್ಯಕ್ಷರು ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅದರನ್ವಯ ಜಿಲ್ಲಾಧಿಕಾರಿ ದಿವ್ಯ ಪ್ರಭು ವಾದ-ಪ್ರತಿವಾದ ಆಲಿಸಿ ಮೇಲ್ಮನವಿ ವಜಾಗೊಳಿಸಿದ್ದಾರೆ ಎಂದರು.
ಮೇಲ್ಮನವಿ ವಜಾಗೊಳಿಸಿದ್ದಲ್ಲದೆ, ಎಸಿ ನ್ಯಾಯಾಲಯದ ಆದೇಶ ಎತ್ತಿ ಹಿಡಿದು ಪ್ರಮಾಣ ಪತ್ರ ರದ್ದುಗೊಳಿಸಿರುವ ಕ್ರಮ ನ್ಯಾಯಸಮ್ಮತ ಎಂದು ಆದೇಶಿಸಿದ್ದಾರೆ. ಹೀಗಾಗಿ ಖೊಟ್ಟಿ ಪ್ರಮಾಣದ ಮೂಲಕ ಅಧ್ಯಕ್ಷರಾಗಿದ್ದ ರವಿ ಕಸಮಳಗಿ ಅವರನ್ನು ಅನರ್ಹಗೊಳಿಸಿ, ಹೊಸ ಅಧ್ಯಕ್ಷರ ಆಯ್ಕೆ ಮಾಡುವಂತೆ ಆಗ್ರಹಿಸಿದರು.
ಗ್ರೇಡ್ 2 ತಹಸೀಲ್ದಾರ ನೀಡಿದ ಜಾತಿ ಪ್ರಮಾಣಪತ್ರ ಹಾಗೂ ಅವರದ್ದೇ ನ್ಯಾಯಾಲಯದಲ್ಲಿ ನೀಡಿದ ತೀರ್ಪಿನಿಂದ ಇಷ್ಟೊಂದು ಅವಾಂತರಕ್ಕೆ ಕಾರಣವಾಗಿದೆ. ತಪ್ಪಿಸ್ಥರಿಗೆ ಶಿಕ್ಷೆ ಆಗಬೇಕಿದ್ದು, ಎಲ್ಲರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಹೋರಾಟ ನಡೆಸಲಾಗುವುದು ಎಂದರು.
ರವೀಂದ್ರ ಕೆಂಗಾನೂರ, ರಮೇಶ ಹಣಮೂರ, ನಾಗೇಂದ್ರ ಕೊಂಪಣ್ಣವರ, ತವನಪ್ಪ ಕುರಕುರಿ, ಇತರರು ಇದ್ದರು.