ಬಾರದ ಮಳೆ, ಬಾಡಿದ ಬೆಳೆ

mkg
Published on

ಷಣ್ಮುಖ ಬಿ.ಈ. ನ್ಯಾಮತಿ
ಕಳೆದ ತಿಂಗಳು ಸಾಕೆನ್ನಿಸುವಷ್ಟು ಸುರಿದ ವರುಣ ಇದೀಗ ಬೇಕೆಂದರೂ ಬರುತ್ತಿಲ್ಲ. ಭೂಮಿಗೆ ಬಿದ್ದ ಬೀಜ ಚಿಗುರಿ ನಳನಳಿಸುತ್ತಿರುವಾಗಲೇ ಮಳೆರಾಯ ಮುನಿಸಿಕೊಂಡಿದ್ದು, ಬೆಳೆ ಬಾಡುತ್ತಿರುವುದರುಂದ ರೈತರು ಚಿಂತಾಕ್ರಾಂತರಾಗಿದ್ದಾರೆ.

ತಾಲೂಕಿನಾದ್ಯಂತ ಶೇಂಗಾ, ಹತ್ತಿ, ತೊಗರಿ, ರಾಗಿ, ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ. ಕಳೆದ ತಿಂಗಳು ಮಳೆ ವಿಳಂಬವಾದ ಹಿನ್ನೆಲೆಯಲ್ಲಿ ಕೆಲವೆಡೆ 2 ನೇ ಹಂತದಲ್ಲಿ ಬಿತ್ತನೆ ಮಾಡಲಾಗಿದೆ. ಆದರೆ, ಆಗಸ್ಟ್ ತಿಂಗಳಲ್ಲಿ ಮಳೆ ಕೈಕೊಟ್ಟಿರುವ ಪರಿಣಾಮ ಬೆಳೆ ಕಮರುತ್ತಿದೆ.

ತಾಲೂಕಿನಲ್ಲಿ ತೊಗರಿ 480 ಹೆಕ್ಟೇರ್, ಶೇಂಗಾ-510 ಹೆ., ಹತ್ತಿ-130 ಹೆ., ಸೋಯಾಬಿನ್ 40 ಹೆ., ಅಲಸಂದಿ 210 ಹೆ., ರಾಗಿ 100 ಹೆ., ಮೆಕ್ಕೆಜೋಳ 13950 ಹೆ. ಸೇರಿ ಒಟ್ಟು 16025 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ.

ಪ್ರಸ್ತುತ ಮಳೆ ಕೊರತೆಯಿಂದ ಹೊನ್ನಾಳಿ-ನ್ಯಾಮತಿ ತಾಲೂಕಿನಲ್ಲಿ 1500 ರಿಂದ 2000 ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗುವ ಸಂಭವವಿದೆ ಎಂದು ಕೃಷಿ ಅಧಿಕಾರಿ ಪ್ರತಿಮಾ ಎ.ಎಸ್. ತಿಳಿಸಿದರು.

ಮಳೆಗಾಲವು ಜೂನ್‌ನಿಂದ ಪ್ರಾರಂಭಗೊಂಡು ಸೆಪ್ಟೆಂಬರ್‌ವರೆಗೂ ಮುಂಗಾರು ಮಳೆ ಸಮಯ. ಜೂನ್ ವಾಡಿಕೆ ಮಳೆ 72.0.ಮಿಮೀ. ಆದರೆ, ಬಂದದ್ದು ಮಾತ್ರ 52.2.ಮಿ.ಮೀ. ಅದರಂತೆ, ಜುಲೈ ವಾಡಿಕೆ 94.4.ಮಿ.ಮೀ ಇದ್ದರೆ, ಬಂದದ್ದು 64.4 ಮಿ.ಮೀ. ಆಗಸ್ಟ್ ವಾಡಿಕೆ ಮಳೆ 61.8 ಆಗಿದ್ದು, ಈವರೆಗೆ ಕೇವಲ 9.5 ಮಿ.ಮೀ ಮಳೆಯಾಗಿದೆ.

ತಾಲೂಕಿನಾದ್ಯಂತ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಇದುವರೆಗೂ 8200 ಕ್ಕೂ ಹೆಚ್ಚು ರೈತರು ಬೆಳೆ ವಿಮೆ ನೋಂದಣಿ ಮಾಡಿಕೊಂಡಿದ್ದಾರೆ.


ನ್ಯಾಮತಿ ತಾಲೂಕಿನಾದ್ಯಂತ ಬೆಳೆಗಳಿಗೆ ಶೀಘ್ರ ಮಳೆಯ ಅವಶ್ಯಕತೆ ಇದೆ. ಮಣ್ಣಿನ ತೇವಾಂಶ ಕೊರತೆಯಿಂದ ಬೆಳೆಗಳು ಬಾಡುತ್ತಿವೆ. ಇನ್ನೂ ನಾಲ್ಕು ದಿನಗಳಲ್ಲಿ ಮಳೆ ಬಾರದಿದ್ದಲ್ಲಿ ಬೆಳೆಗಳು ಉಳಿಯುವುದು ಕಷ್ಟ.
-ಪ್ರತಿಮಾ ಎ.ಎಸ್., ಸಹಾಯಕ ಕೃಷಿ ನಿರ್ದೇಶಕಿ, ಹೊನ್ನಾಳಿ.

ಪ್ರಸ್ತುತ ವರ್ಷ ಮುಂಗಾರು ಮಳೆ ಕುಂಠಿತವಾಗಿದ್ದು, ತಾಲೂಕಿನಾದ್ಯಂತ ಬೆಳೆ ಒಣಗುತ್ತಿದೆ. ಆದ್ದರಿಂದ ಸರ್ಕಾರ ಬರಪೀಡಿತ ತಾಲೂಕೆಂದು ಘೋಷಿಸುವ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು.
-ಬಿ.ಎಚ್. ಉಮೇಶ್ ಬೆಳಗುತ್ತಿ, ಅಖಂಡ ಕರ್ನಾಟಕ ರೈತ ಸಂಘದ ಅಧ್ಯಕ್ಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net