ಬರಪೀಡಿತ ಜಿಲ್ಲೆ ಘೋಷಣೆಗೆ ಆಗ್ರಹ; ಎಕೆಆರ್‌ಎಸ್‌ನಿಂದ ಮನವಿ

AKRAS DROUGHT
ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್‌ಗೆ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಅರವಿಂದ ಕುಲಕರ್ಣಿ, ಪಾಂಡು ಪ್ಯಾಟಿ, ಪ್ರಲ್ಹಾದ ನಾಗರಾಳ ಮತ್ತಿತರರಿದ್ದಾರೆ.
Published on

ವಿಜಯಪುರ: ಬರಪೀಡಿತ ಜಿಲ್ಲೆ ಎಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸಲು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಮುಂಗಾರು ಹಂಗಾಮು ಅರ್ಧ ಕಳೆಯುತ್ತಾ ಬಂದರೂ ಈವರೆಗೆ ಮಳೆ ಸಮರ್ಪಕವಾಗಿಲ್ಲ. ಸಂಪೂರ್ಣ ಬರ ಆವರಿಸಿದೆ. ಕಳೆದ 15 ದಿನಗಳ ಹಿಂದೆ ಕೆಲವೊಂದು ಭಾಗದಲ್ಲಿ ಮಾತ್ರ ಸಲ್ಪಸ್ವಲ್ಪ ಮಳೆ ಆಗಿದ್ದು ಬಿಟ್ಟರೆ ಬಹುತೇಕ ತಾಲೂಕುಗಳಲ್ಲಿ ಸಮರ್ಪಕವಾಗಿ ಮಳೆ ಸುರಿದಿಲ್ಲ. ಈಗ ಸರ್ಕಾರ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ ಸಮೀಕ್ಷೆ ನಡೆಸಲು ತಿಳಿಸಿದೆ. ಅದರಲ್ಲಿ ವಿಜಯಪುರ ಅಖಂಡ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಬೇಕೆಂದು ಒತ್ತಾಯಿಸಿದರು.

ರಾಜ್ಯದಲ್ಲಿ ಒಟ್ಟು 113 ತಾಲೂಕುಗಳಲ್ಲಿ ಮಳೆ ಕೊರತೆ ಎದುರಿಸುತ್ತಿರುವ ತಾಲೂಕುಗಳೆಂದು ಗುರುತಿಸಿ ಅದರಲ್ಲಿ 38 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದೆ ಎಂದು ಕೆಎಸ್‌ಎಸ್‌ಎಂಸಿ ತಿಳಿಸಿದೆ. ಅದರಲ್ಲಿ ವಿಜಯಪುರ ಜಿಲ್ಲೆಯಲ್ಲಿರುವ ಒಟ್ಟು 13 ತಾಲೂಕುಗಳ ಪೈಕಿ ಕೇವಲ 5 ತಾಲೂಕುಗಳಲ್ಲಿ ಮಳೆ ಕೊರತೆ ತಾಲೂಕುಗಳೆಂದು ಗುರುತಿಸಲಾಗಿದೆ. ಅದರಲ್ಲಿ ಮುದ್ದೇಬಿಹಾಳ, ಚಡಚಣ, ದೇವರ ಹಿಪ್ಪರಗಿ, ಅದರಂತೆ ತೀವ್ರ ಮಳೆ ಕೊರತೆ ಇರುವ ತಾಲೂಕುಗಳೆಂದು ಬಬಲೇಶ್ವರ, ನಿಡಗುಂದಿ ಈ ಎರಡು ತೀವ್ರ ಮಳೆ ಕೊರತೆ ತಾಲೂಕುಗಳೆಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದವರು ಸರ್ಕಾರಕ್ಕೆ ತಪ್ಪು ವರದಿ ಸಲ್ಲಿಸಿದ್ದಾರೆ. ಸರಿಯಾಗಿ ಸಮೀಕ್ಷೆ ನಡೆಸದೆ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಇನ್ನುಳಿದ 8 ತಾಲೂಕುಗಳನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ರಾಜ್ಯ ನೈಸರ್ಗಿಕ ಉಸ್ತುವಾರಿ ಕೇಂದ್ರದವರು ವಿವಿಧ ರೈತ ಸಂಘಟನೆಗಳ ಮುಖಂಡರೊಂದಿಗೆ 13 ತಾಲೂಕುಗಳಲ್ಲಿ ಸಮೀಕ್ಷೆ ನಡೆಸಲಿ. ಅದನ್ನು ಬಿಟ್ಟು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ಉಳಿದ ತಾಲೂಕುಗಳನ್ನು ನಿರ್ಲಕ್ಷಿಸಲಾಗಿದೆ ಎಂದರು.

ಈಗ ಕಳಿಸಿರುವ ವರದಿಯನ್ನು ಪರಿಗಣಿಸದೆ ಪುನಃ 13 ತಾಲೂಕುಗಳಲ್ಲಿ ರೈತ ಮುಖಂಡರೊಂದಿಗೆ ಸಮೀಕ್ಷೆ ನಡೆಸಬೇಕು. ಒಟ್ಟು 13 ತಾಲೂಕುಗಳನ್ನು ತೀವ್ರ ಮಳೆ ಕೊರತೆ ತಾಲೂಕುಗಳೆಂದು ಪರಿಗಣಿಸಿ ಸಂಪೂರ್ಣ ವಿಜಯಪುರ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ ಹಾನಿಗೊಳಗಾದ ಮುಂಗಾರು ಬೆಳಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.

ರೈತ ಮುಖಂಡರಾದ ಪಾಂಡು ಪ್ಯಾಟಿ, ಪ್ರಲ್ಹಾದ ನಾಗರಾಳ, ಹೊನಕೇರಪ್ಪ ತೆಲಗಿ, ಲಾಲಸಾಬ ಹಳ್ಳೂರ, ಸುಭಾಷಗೌಡ ಬಿಸಿರೊಟ್ಟಿ, ಬನ್ನೆಪ್ಪ ಜೋಗಿ, ರ‌್ಯಾವಪ್ಪಗೌಡ, ರಾಮಣ್ಣ ಮಾಶ್ಯಾಳ, ಶೆಟ್ಟೆಪ್ಪ ಲಮಾಣಿ, ಸಿದ್ಲಿಂಗಪ್ಪ ಬಿರಾದಾರ, ಸಿದ್ದಪ್ಪ ಮುತ್ತತ್ತಿ, ಗುರಲಿಂಗಪ್ಪ ಪಡಸಲಗಿ, ಚಂದ್ರಾಮ ಹಿಪ್ಪಲಿ, ಬಾಲಪ್ಪಗೌಡ ಲಿಂಗದಳ್ಳಿ, ಸಂಗನಗೌಡ ಕೊಳೂರ, ಬಸನಗೌಡ ಹೊಸಳ್ಳಿ, ನಿಂಗನಗೌಡ ಬಿರಾದಾರ, ರಾಮನಗೌಡ ಬಿರಾದಾರ, ರಾಮನಗೌಡ ಬಿರಾದಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net