ಬರಪೀಡಿತ ತಾಲೂಕು ಘೋಷಣೆಗೆ ಆಗ್ರಹ

jds
Published on

ಮುಂಡರಗಿ: ಮುಂಡರಗಿ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ಜೆಡಿಎಸ್ ತಾಲೂಕು ಘಟಕದ ವತಿಯಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.

ಮುಂಡರಗಿಯನ್ನು ಹೊರತುಪಡಿಸಿ ಜಿಲ್ಲೆಯ 6 ತಾಲೂಕು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಮುಂಡರಗಿಯಲ್ಲಿ ಜುಲೈನಲ್ಲಿ ಮಳೆ ಆಗಿದ್ದರಿಂದ ಗೋವಿನಜೋಳ ಸೇರಿದಂತೆ ಹಲವು ಬೆಳೆ ಬಿತ್ತನೆ ಮಾಡಲಾಯಿತು. ಜುಲೈ ನಂತರ ಮಳೆ ಆಗಿಲ್ಲ. ಬಿತ್ತಿದ ಬೆಳೆ ಸಂಪೂರ್ಣ ನಾಶವಾಯಿತು. ಗೋವಿನಜೋಳ ಬೆಳೆದ ರೈತರು ಟ್ರಾಕ್ಟರ್ ಮೂಲಕ ಹರಗಿದ್ದಾರೆ.

ರಾಜ್ಯದಲ್ಲಿ ತೀವ್ರತರವಾದ ಬರಗಾಲ ಆವರಿಸಿದೆ. ಸುಮಾರು ಒಂದೂವರೆ ತಿಂಗಳಿನಿಂದ ಮಳೆ ಬಾರದ ಕಾರಣ ಬೆಳೆಯಲ್ಲಿ ಶೇ.75ಭಾಗ ಸಂಪೂರ್ಣ ನಾಶವಾಗಿದೆ. ಕಂದಾಯ ಸಚಿವರೇ 196 ತಾಲೂಕುಗಳಲ್ಲಿ ಬರಗಾಲದ ಛಾಯೆ ಇದೆ ಎಂದು ತಿಳಿಸಿದ್ದಾರೆ. ಆದ್ದರಿಂದ ಮುಂಡರಗಿ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ ಎಕರೆಗೆ 25,000 ರೂ. ಪರಿಹಾರ ಮತ್ತು ಬೆಳೆ ವಿಮೆ ಮಾಡಿಸಿದ ರೈತರಿಗೆ ಮಧ್ಯಂತರ ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಗ್ರೇಡ್-2 ತಹಸೀಲ್ದಾರ್ ಕೆ.ರಾಧಾ ಮನವಿ ಸ್ವೀಕರಿಸಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ಜಿ.ಕೆ. ಕೊಳ್ಳಿಮಠ, ಅಶೋಕ ತ್ಯಾಮನವರ, ಹನುಮಂತಪ್ಪ ಕಂಚಗಾರ, ಮಂಜುನಾಥ ದೊಡ್ಡಮನಿ, ಮಹ್ಮದರಫೀಕ್ ಹವಾಲ್ದಾರ್, ಉಮೇಶ ಹಿರೇಮಠ, ವೌಲಾಹುಸೇನ್ ತಾಂಬೂಲಿ, ದೇವರಡ್ಡಿ ರಾಜೂರ, ಈರಪ್ಪ ಶಿದ್ನೇಕೊಪ್ಪ, ಚನವೀರಯ್ಯ ಸಾಲಿಮಠ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net