ಬರಪೀಡಿತ ತಾಲೂಕು ಘೋಷಣೆಗೆ ಆಗ್ರಹ

HNL strike
Published on

ಹಾನಗಲ್ಲ: ತಾಲೂಕನ್ನು ಬರಪೀಡಿತ ಎಂದು ಘೋಷಿಸಬೇಕು, ಬೆಳೆವಿಮೆ ಕಟ್ಟಿದ ರೈತರಿಗೆ ಶೇ.25 ಮಧ್ಯಂತರ ಪರಿಹಾರ ವಿತರಿಸಬೇಕು, ವಿದ್ಯುತ್ ಸಮಸ್ಯೆ ಬಗೆಹರಿಸಬೇಕು ಮತ್ತಿತರ ಬೇಡಿಕೆ ಈಡೇರಿಸಬೇಕು ಎಂದು ರೈತಸಂಘದಿಂದ ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಕುಮಾರೇಶ್ವರ ಮಠದಿಂದ ಮಹಾತ್ಮಾಗಾಂಧಿ ವೃತ್ತದವರೆಗೆ ಬೈಕ್ ರ‌್ಯಾಲಿ ನಡೆಸಿ ಸಂಜೆವರೆಗೆ ವಾಹನ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು. ತಹಸೀಲ್ದಾರ್ ರವಿ ಕೊರವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಪ್ರಸ್ತುತ ವರ್ಷ ಮುಂಗಾರು ಹಂಗಾಮಿನಲ್ಲಿ ಮಳೆ ಬಾರದೇ ರೈತರ ಎಲ್ಲ ಬೆಳೆಗಳೂ ಹಾನಿಗೊಳಗಾಗಿವೆ. ಅವೆಲ್ಲದರ ಸರ್ವೇ ಕೈಗೊಂಡಿದ್ದರೂ ಇದುವರೆಗೆ ಸರ್ಕಾರ ಹಾನಗಲ್ಲ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುತ್ತಿಲ್ಲ. ಜಿಲ್ಲೆಯ ಶಾಸಕರು, ಸಂಸದರು ರೈತರನ್ನು ಹಾಗೂ ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಿದ್ದಾರೆ ಎಂದು ರೈತರು ಆರೋಪಿಸಿದರು.

ರೈತಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ಕಳೆದ ವರ್ಷ ಅಡಕೆಗೆ ಕಂತು ಕಟ್ಟಿದ ಬೆಳೆವಿಮಾ ಪರಿಹಾರ ಇನ್ನೂ ಬಿಡುಗಡೆಯಾಗಿಲ್ಲ. ಸರ್ಕಾರ ರೈತರ ಆರ್ಥಿಕ ಸಮಸ್ಯೆಗಳನ್ನು ಅರ್ಥಮಾಡಿಕೊಂಡು, ಕೂಡಲೇ ಪರಿಹಾರ ಬಿಡುಗಡೆಗೊಳಿಸಬೇಕು. ಕಳೆದ ವರ್ಷ ಅತಿವೃಷ್ಟಿಯಿಂದ ಅಡಕೆ ಬೆಳೆಹಾನಿಯಾದ 1561 ಪ್ರಕರಣಗಳು ಸಾರ್ವತ್ರಿಕ ಚುನಾವಣೆ, ಅಧಿಕಾರಿಗಳ ವರ್ಗಾವಣೆ ಇತ್ಯಾದಿ ಸಮಸ್ಯೆಗಳಿಂದಾಗಿ ಇತ್ಯರ್ಥವಾಗದೇ ರೈತರಿಗೆ ಪರಿಹಾರ ಬಾರದಂತಾಗಿದೆ. ಇದನ್ನು ಜಿಲ್ಲಾಡಳಿತ ಪರಿಶೀಲಿಸಿ ಕೂಲೇ ಹಣ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪದಾಧಿಕಾರಿಗಳಾದ ಅಡಿವೆಪ್ಪ ಆಲದಕಟ್ಟಿ, ರುದ್ರಪ್ಪ ಹಣ್ಣಿ, ಷಣ್ಮುಖ ಅಂದಲಗಿ, ಸೋಮಣ್ಣ ಜಡೆಗೊಂಡರ, ರಾಜೀವ ದಾನಪ್ಪನವರ, ಗುಲಾಬ ಬಡಗಿ, ಶ್ರೀಕಾಂತ್ ದುಂಡಣ್ಣನವರ, ಪ್ರೇಮಾ ಪೂಜಾರ, ಶಂಕ್ರಮ್ಮ ಸುಣಗಾರ, ಸುಜಾತಾ ನಂದಿಶೆಟ್ಟರ, ಮಲ್ಲನಗೌಡ ಮತ್ತಿಗಟ್ಟಿ, ಅನೀಲ ಚಿಕ್ಕಾಂಶಿ, ಕರಬಸಪ್ಪ ಮಾಕೊಪ್ಪದ, ಶಿವಪ್ಪ ದಾನಪ್ಪನವರ, ರುದ್ರಗೌಡ ಪಾಟೀಲ, ರಾಮಣ್ಣ ಕೋಟಿ, ಗಿರಿಧರಸ್ವಾಮಿ ಹಿರೇಮಠ, ಶಂಭುಗೌಡ ಪಾಟೀಲ, ಅಜ್ಜನಗೌಡ ಕರೇಗೌಡ್ರ, ಲೋಕೇಶ ಹುಲಿ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net