ಬರಗಾಲ ಪೀಡಿತ ಪ್ರದೇಶ ಘೋಷಣೆಗೆ ಆಗ್ರಹ

BYD 1
Published on

ಬ್ಯಾಡಗಿ: ತಾಲೂಕನ್ನು ಬರಗಾಲ ಪ್ರದೇಶವೆಂದು ಘೋಷಿಸದಿದ್ದಲ್ಲಿ ಸೆ. 25ರಂದು ಹಾವೇರಿಯಲ್ಲಿ ಉಸ್ತುವಾರಿ ಸಚಿವರ ಜನತಾ ದರ್ಶನ ಕಾರ್ಯಕ್ರಮಕ್ಕೆ ಘೇರಾವ್ ಹಾಕಿ ಪ್ರತಿಭಟನೆ ನಡೆಸುವುದಾಗಿ ರೈತ ಸಂಘದ ಕಾರ್ಯಕರ್ತರು ಎಚ್ಚರಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ತಾಲೂಕಾಧ್ಯಕ್ಷ ರುದ್ರಗೌಡ್ರ ಕಾಡನಗೌಡ್ರ ಮಾತನಾಡಿ, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹಾಗೂ ಜಿಲ್ಲೆಯ ಶಾಸಕರಿಗೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಸೆ. 13ರಂದು 2 ಸಾವಿರ ಜನ ರೈತರು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಒತ್ತಾಯಿಸಿದ್ದರೂ ತಾಲೂಕನ್ನು ಬರಗಾಲ ಪಟ್ಟಿಯಲ್ಲಿ ಸೇರ್ಪಡೆ ಮಾಡಿಲ್ಲ. ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಚಿವರಿಗೆ ಪಾಲ್ಗೊಳ್ಳಲು ಬಿಡುವುದಿಲ್ಲ. ರೈತರ ಬಗ್ಗೆ ಹಗುರವಾಗಿ ಮಾತನಾಡಿದ ಸಚಿವರು ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ಕೇಂದ್ರದ ಎನ್‌ಡಿಆರ್‌ಎಫ್ ನೀತಿಯಿಂದ ಬರಗಾಲ ಘೋಷಣೆಗೆ ತೊಂದರೆಯಾಗಿದೆ. ನಿಯಮಾವಳಿ ತಿದ್ದುಪಡಿ ಮಾಡಿಸುವ ಜವಾಬ್ದಾರಿ ಸಂಸದರು ಮಾಡಬೇಕು. ಆದರೆ, ಹಾವೇರಿ ಸಂಸದ ಶಿವಕುಮಾರ ಉದಾಸಿ ಸೇರಿದಂತೆ ರಾಜ್ಯದ ಸಂಸದರು ರೈತ ಪರ ಮಾತನಾಡುತ್ತಿಲ್ಲ. ಇನ್ಮುಂದೆ ಶಾಸಕರ, ಸಂಸದರ ಎಲ್ಲ ಸರ್ಕಾರಿ ಕಾರ್ಯಕ್ರಮಗಳಿಗೆ ಘೇರಾವ್ ಹಾಕುತ್ತೇವೆ ಎಂದರು.

ರೈತ ಸಂಘದ ಗೌರವಾಧ್ಯಕ್ಷ ಮಂಜು ತೋಟದ, ಕಾರ್ಯಾಧ್ಯಕ್ಷ ಕಿರಣಕುಮಾರ ಗಡಿಗೋಳ, ಮೌನೇಶ ಕಮ್ಮಾರ, ಕೆ.ವಿ.ದೊಡ್ಡಗೌಡ್ರ, ಸಂತೋಷ ಬಡ್ಡಿಯವರ, ನಿಂಗಪ್ಪ ಅಂಗರಗಟ್ಟಿ, ವಿರೂಪಾಕ್ಷಪ್ಪ ಗುಡಗೂರ, ಪ್ರಕಾಶ ಸಿದ್ದಪ್ಪನವರ, ಈಶ್ವರ ಅಜಗೊಂಡರ, ಪ್ರಕಾಶ ಕದರಮಂಡಲಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net