

ಎಂ.ವಿ.ರವೀಂದ್ರ ಮಾಲೂರು
ಬೇಸಿಗೆಯಲ್ಲಿ ಬಿಸಿಲಿನ ಬೇಗೆ ಹೆಚ್ಚಾಗುತ್ತಿದಂತೆ ಜನರು ತಂಪು ಪಾನೀಯ, ಹಣ್ಣುಗಳ ಸೇವನೆಗೆ ಆಸಕ್ತಿ ತೋರುತ್ತಿದ್ದಾರೆ. ಮಾಲೂರಿನ ಪಟ್ಟಣದ ರೈಲ್ವೆ ಸೇತುವೆ ರಸ್ತೆಯ ಬದಿಗಳಲ್ಲಿ ಎಲ್ಲಿ ಕಣ್ಣಾಡಿಸಿದರೂ ತಾಳೆಹಣ್ಣು ದರ್ಶನವಾಗುತ್ತಿದೆ. ಸಾರ್ವಜನಿಕರು ತಾಳೆಹಣ್ಣನ್ನು ಖರೀದಿಗೆ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ.
ತಾಳೆಹಣ್ಣು (ತಾಟಿನಿಂಗು) ಎಳನೀರಿನಷ್ಟೇ ಆರೋಗ್ಯಕರ ಗುಣ ಹೊಂದಿದ್ದು, ಹೆಚ್ಚು ವಿಟಮಿನ್ ಇರುವುದರಿಂದ ಗ್ರಾಹಕರ ಬೇಡಿಕೆ ಹೆಚ್ಚಾಗುತ್ತಿದೆ. ಇದರಲ್ಲಿ ಯಾವುದೇ ಕೆಮಿಕಲ್ ಇರುವುದಿಲ್ಲ. ನೋಡಲು ಬಿಳಿಜಲ್ಲಿಯಂತೆ ಕಾಣುವ, ವಿನ್ಯಾಸದಲ್ಲಿ ಲಿಚಿಯನ್ನು ಹೋಲುವ ರುಚಿಯಲ್ಲಿ ತಾಜಾ ತೆಂಗಿನಕಾಯಿ ಹೋಲುವ ತಾಟಿನಿಂಗು ಸಾಮಾನ್ಯವಾಗಿ ಸಾರ್ವಜನಿಕರ ಕೈಗೆ ಸುಲಭವಾಗಿ ಕಡಿಮೆ ದರದಲ್ಲಿ ಸಿಗುತ್ತದೆ. ಆದ್ದರಿಂದ ಸಾರ್ವಜನಿಕರು ಪಾನೀಯಗಳನ್ನು ಕುಡಿದು ಆರೋಗ್ಯವನ್ನು ಹಾಳು ಮಾಡಿಕೊಳ್ಳುವ ಬದಲು ತಾಳೆಹಣ್ಣು ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಇದರಿಂದ ದೇಹ ತಂಪಾಗಿರುತ್ತದೆ ಹಾಗೂ ಆರೋಗ್ಯ ಚೆನ್ನಾಗಿರುತ್ತದೆ.
ಕಾಡುಗಳಲ್ಲಿ ಸಿಗುವ ಹಣ್ಣು: ತಾಟಿನಿಂಗು ತಮಿಳುನಾಡಿನ ಅಂಬುರ್, ಸೇಲಂ, ಧರ್ಮಪುರಿ, ಹೊಸೂರು, ಗುಡಿಯತ್ತಂ ಕಾಡುಗಳಲ್ಲಿ ಹೆಚ್ಚು ದೊರೆಯುತ್ತದೆ. ಅಂಬೂರಿನಲ್ಲಿ ಜನತೆ ತಾಳೆ ಕಿತ್ತಿಕೊಂಡು ಮಾಲೂರಿಗೆ ರೈಲು ಸಂಪರ್ಕ ಸುಲಭವಾಗಿರುವುದರಿಂದ ಮಾಲೂರಿನಲ್ಲಿ ಬಂದು ಮಾರಾಟ ಮಾಡುತ್ತಿದ್ದಾರೆ. ತಾಳೆಹಣ್ಣು ಪ್ರತಿ ವರ್ಷ ಮಾರ್ಚ್‌ನ ಅಂತ್ಯದಲ್ಲಿ ಆರಂಭವಾಗಿ ಮೇ ತಿಂಗಳಿನ ಕೊನೆಯವರೆಗೂ ಕಾಡುಗಳಲ್ಲಿ ಸಿಗುತ್ತದೆ ವ್ಯಾಪಾರಿ ರಂಜಿತ್‌ಕುಮಾರ್ ತಿಳಿಸಿದರು.
ಗುಡಿಸಲಿನ ಮೇಲ್ಛಾವಣಿಗೆ ಗರಿ ಬಳಕೆ: ತಾಟಿನಿಂಗಿನ ಮರದಲ್ಲಿ ಬಿಡುವ ಗರಿಗಳನ್ನು ಗುಡಿಸಲು ಮನೆಗಳ ಮೇಲ್ಛಾವಣಿಗೂ ಬಳಸುತ್ತಾರೆ. ತಮಿಳುನಾಡಿನ ಗ್ರಾಮೀಣ ಭಾಗದಲ್ಲಿ ಇಂತಹ ಗುಡಿಸಲುಗಳನ್ನು ನೋಡಬಹುದಾಗಿದೆ. ಅಲ್ಲದೇ ಚಾಪೆ ತಯಾರಿಗೂ ಇದರ ಗರಿಗಳನ್ನು ಉಪಯೋಗಿಸುತ್ತಾರೆ ಎನ್ನುತ್ತಾರೆ ರಂಜಿತ್.