ಕಾಡಾನೆ ಉಪಟಳ ನಿಯಂತ್ರಣಕ್ಕೆ ಆಗ್ರಹ

12blrp3
Published on

 ಬೇಲೂರು: ತಾಲೂಕಿನ ಮಲೆನಾಡು ಭಾಗದ ವಿವಿಧ ಗ್ರಾಮಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡು, ಹಗಲಿನಲ್ಲಿ ಕಾಫಿ ತೋಟಗಳಲ್ಲಿದ್ದರೆ ರಾತ್ರಿಯಾಗುತಿದ್ದಂತೆ ಆಹಾರ ಅರಸಿ ವಾಸದ ಮನೆಗಳತ್ತಲೇ ನುಗ್ಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕಾಡಾನೆಗಳನ್ನು ಶಾಶ್ವತವಾಗಿ ಓಡಿಸಲು ಕ್ರಮ ಕೈಗೊಳ್ಳುವಂತೆ ರೈತರು, ಬೆಳೆಗಾರರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿ ವ್ಯಾಪ್ತಿಯ ವಿವಿಧ ಪ್ರದೇಶ ಮತ್ತು ಗ್ರಾಮಗಳಲ್ಲಿ ನಿತ್ಯ ಕಾಡಾನೆಗಳ ಉಪಟಳ ಹೆಚ್ಚುತ್ತಲೇ ಇದೆ. ಜತೆಗೆ ಎಲ್ಲೆಂದರಲ್ಲಿ ಗುಂಪಾಗಿ ಅಥವಾ ಒಂಟಿ ಮತ್ತು ಎರಡು ಆನೆಗಳು ಇತ್ತೀಚಿನ ದಿನಗಳಲ್ಲಿ ಓಡಾಡಲು ಪ್ರಾರಂಭಿಸಿವೆ. ಇದರಿಂದ ಸಾರ್ವಜನಿಕರು, ರೈತರು, ಬೆಳೆಗಾರರು, ಕೂಲಿ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ಯಾವ ರಸ್ತೆಯಲ್ಲಿ ಓಡಾಡುವುದು ಎಂಬುದು ತಿಳಿಯದಂತಾಗಿ ಆತಂಕದಿಂದಲೇ ಗುಂಪಾಗಿ ದೊಡ್ಡ ಶಬ್ದ ಮಾಡಿಕೊಂಡು ಓಡಾಡುವಂತಾಗಿದೆ. ಅವುಗಳ ಹಾವಳಿಗೆ ಬೆಳೆ ಕಳೆದುಕೊಂಡು ನಲುಗಿ ಹೋಗಿದ್ದಾರೆ. ಇಷ್ಟೇ ಅಲ್ಲ, ಕತ್ತಲಾಗುತಿದ್ದಂತೆಯೇ ಗ್ರಾಮಗಳ ಸಮೀಪಕ್ಕೆ ಆಗಮಿಸುವ ಕಾಡಾನೆಗಳು ಮನೆಯ ಹೊರ ಆವರಣದಲ್ಲಿ ಬೆಳೆದಿದ್ದ ಬೆಳೆ ತಿನ್ನುತ್ತಿವೆ. ಇದರಿಂದಾಗಿ ನಿವಾಸಿಗಳು ಕತ್ತಲಾಗುತ್ತಿದ್ದಂತೆ ಮನೆಯಿಂದ ಆಚೆ ಬರಲು ಎದುರುವಂತಾಗಿದೆ.

ಕಣ್ಣು ಮುಚ್ಚಿ ನಿದ್ರಿಸಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣಗಿದೆ. ಅಲ್ಲದೆ, ಎರಡು ದಿನದ ಹಿಂದೆ ತಾಲೂಕಿನ ಅನುಘಟ್ಟ ಗ್ರಾಮದ ಮಹೇಶ್ ಅವರ ಮನೆ ಬಳಿ ಬಂದಿದ್ದ ಕಾಡಾನೆಗಳು ಸಮೀಪದಲ್ಲೆ ಬೆಳೆದಿದ್ದ ಬಿದಿರನ್ನು ಎಳೆದು ತಿಂದಿದ್ದಲ್ಲದೆ, ಮತ್ತಷ್ಟು ತಿನ್ನಲು ದೊಡ್ಡ ಬಿದಿರನ್ನು ಎಳೆದ ವೇಳೆ ಬಿದಿರು ಎರಡು ವಿದ್ಯುತ್ ತಂತಿಗೆ ಸ್ಪರ್ಶಿಸಿ ಬೆಂಕಿ ಉಗುಳಿದೆ. ಈ ಸಂದರ್ಭ ಗಾಬರಿಗೊಂಡ ಕಾಡಾನೆಗಳು ಪಕ್ಕದ ದಿವಾಕರ್ ಎಂಬುವರ ತೋಟಕ್ಕೆ ತೆರಳಿವೆ.

ಈ ಭಾಗದಲ್ಲಿ ಮರಿಯೊಂದಿಗೆ 2 ಕಾಡಾನೆಗಳು ರಸ್ತೆ, ತೋಟ, ಜಮೀನುಗಳ ಸಮೀಪವೇ ಓಡಾಡುತ್ತಿರುವುದರಿಂದ ಸಾರ್ವಜನಿಕರು ಗ್ರಾಮಗಳ ರಸ್ತೆಗಳಲ್ಲಿ ತಿರುಗಾಡಲು ಭಯಪಡುತ್ತಿದ್ದಾರೆ. ಆದ್ದರಿಂದ ಕಾಡಾನೆಗಳಿಂದ ರೈತರಿಗೆ, ಬೆಳೆಗಾರರಿಗೆ, ಸಾರ್ವಜನಿಕರಿಗೆ ಸಂಚಕಾರ ಉಂಟಾಗುವ ಮುನ್ನವೇ ಸರ್ಕಾರ ಮತ್ತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹೆಚ್ಚಿನ ಗಮನಹರಿಸಿ ಮಲೆನಾಡು ಬಾಗದಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಬೇಕು. ಅದಕ್ಕೂ ಮುನ್ನ ಈ ಭಾಗದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಆದಷ್ಟು ಬೇಗ ಹಿಡಿದು ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಶಾಶ್ವತ ಪರಿಹಾರ ಕಂಡುಹಿಡಿಯುವಂತೆ ಒತ್ತಾಯ

ಈಗಾಗಲೇ ಕಾಡಾನೆಗಳ ಉಪಟಳದಿಂದ ತಾಲೂಕಿನಲ್ಲಿ ಸಾವಿರಾರು ಎಕರೆ ಬೆಳೆನಾಶ ಮತ್ತು ಅಮಾಯಕ ಜೀವಗಳು ಬಲಿಯಾದ ಹಿನ್ನೆಲೆಯಲ್ಲಿ ಅರಣ್ಯ ಸಚಿವರು ಆಗಮಿಸಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಸಂಘಟನೆಗಳ ಸಭೆ ನಡೆಸಿ ಕಾಡಾನೆ ಸಮಸ್ಯೆಗೆ ಆದಷ್ಟು ಬೇಗ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು. ಅವರು ಹೇಳಿ ಹೋಗಿ 10 ದಿನಗಳು ಕಳೆದರೂ ಕಾಡಾನೆ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಯಾವುದೇ ಮುನ್ಸೂಚನೆ ಕಂಡು ಬಾರದಿರುವುದು ವಿಪರ್ಯಾಸ. ಸಂಬಂಧಿಸಿದ ಸಚಿವರು, ಹಿರಿಯ ಅಧಿಕಾರಿಗಳು ಈ ಬಗ್ಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವತ್ತ ಮುಂದಾಗಬೇಕು. ಇಲ್ಲದಿದ್ದಲ್ಲಿ ಮತ್ತೆ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ರೈತರು, ಬೆಳೆಗಾರರು ಹಾಗೂ ಕಾರ್ಮಿಕರು ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net