

ಧನಂಜಯ ಗುರುಪುರ
ಚತುಷ್ಪಥ ಕಾಮಗಾರಿ ನಡೆಯುತ್ತಿರುವ ಮಂಗಳೂರು-ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ ಕೈಕಂಬದ ಸಹಿತ ಬಹುತೇಕ ಎಲ್ಲ ಕಡೆ ಹೆದ್ದಾರಿ ಕಾಣೆಯಾಗಿ ಕಚ್ಚಾ ರಸ್ತೆ ಸೃಷ್ಟಿಯಾಗಿದ್ದು, ಸಂಚಾರ ಅಯೋಮಯವಾಗಿದೆ. ಕೈಕಂಬ ಜಂಕ್ಷನ್‌ನಲ್ಲಿ ಕಣ್ಣಾಡಿಸಿದರೆ ಎಲ್ಲೆಡೆ ಮಣ್ಣಿನ ರಾಶಿ, ಕೊಳವೆ, ಕಬ್ಬಿಣದ ರಾಡ್, ಗುತ್ತಿಗೆ ಕಂಪನಿಯ ಯಂತ್ರಗಳು ಕಂಡುಬರುತ್ತಿವೆ. ಅಳಿದುಳಿದ ರಸ್ತೆ ಎತ್ತ ಮುಖ ಮಾಡಿದೆ ಎಂಬುದೇ ಅರ್ಥವಾಗುತ್ತಿಲ್ಲ.
ಅಗಲ ಕಿರಿದಾದ ಸರ್ವೀಸ್ ರೋಡ್: ಕೈಕಂಬ ಜಂಕ್ಷನ್‌ನಲ್ಲಿ ನಡೆಯುತ್ತಿರುವ ಫ್ಲೈಓವರ್ ಇದಕ್ಕೆ ಮುಖ್ಯ ಕಾರಣ. ಮಳೆ ನಿಂತ ಮೇಲೆ ಇವೆಲ್ಲಕ್ಕೂ ಪರಿಹಾರ ಸಿಗಬಹುದಾದರೂ, ಕೈಕಂಬದಲ್ಲಿ ‘ಆರ್‌ಇ ವಾಲ್’(ವಿಶೇಷ ತಡೆಗೋಡೆ) ಮೂಲಕ ಎತ್ತರೀಕರಿಸಲಾದ ಹೆದ್ದಾರಿಯ ಎರಡೂ ಪಾರ್ಶ್ವದಲ್ಲಿರುವ ಸರ್ವೀಸ್ ರೋಡ್ ಭವಿಷ್ಯದಲ್ಲಿ ಅನೇಕ ಸಮಸ್ಯೆಗೆ ಕಾರಣವಾಗಬಹುದಾದ ಸೂಚನೆ ಕಂಡು ಬರುತ್ತಿದೆ. ಮಂಗಳೂರಿನಿಂದ ಕೈಕಂಬ ಕಡೆಗೆ ಹೋಗುವಾಗ ಕೈಕಂಬದ ಪೊಂಪೈ ದ್ವಾರಕ್ಕೆ ಅನತಿ ದೂರದಲ್ಲಿರುವ ‘ಆರ್‌ಇ ವಾಲ್’ ಸರ್ವೀಸ್ ರೋಡ್‌ನ ಒಂದು ಪಾರ್ಶ್ವದಲ್ಲಿ ಕೆಲವು ಅಂಗಡಿಗಳಿದ್ದರೆ, ಇನ್ನೊಂದು ಪಾರ್ಶ್ವದಲ್ಲಿ ಕಟ್ಟಡವಿದೆ. ಇವುಗಳು ನೆಲಸಮಗೊಳ್ಳುವಂತೆ ಗೋಚರಿಸುತ್ತಿಲ್ಲ. ಈಗ ನಿರ್ಮಾಣಗೊಂಡಿರುವ ಸರ್ವೀಸ್ ರೋಡ್ ಅಗಲ ಕಿರಿದಾಗಿದೆ.
ದ್ವಿಮುಖ ಸರ್ವೀಸ್ ರೋಡ್!: ಯಾವುದೇ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸರ್ವೀಸ್ ರೋಡ್ ದ್ವಿಮುಖ ರಸ್ತೆಯಾಗಿಲ್ಲ. ಆದರೆ ಎನ್‌ಎಚ್ ಅಧಿಕಾರಿಯೊಬ್ಬರು ಹೇಳುವಂತೆ ಗುರುಪುರ ಕೈಕಂಬದ ಸರ್ವೀಸ್ ರೋಡ್ ದ್ವಿಮುಖ ರಸ್ತೆಯಂತೆ. 14.5 ಮೀಟರ್ ಅಗಲದ ಸರ್ವೀಸ್ ರೋಡ್ ಆಗಿದ್ದರೂ, ಪೋಂಪೈ ದ್ವಾರದ ಬಳಿ ಎರಡೂ ಕಡೆ ಅಗಲ ಕಿರಿದಾಗಿದೆ. ಇಲ್ಲಿ ದ್ವಿಮುಖ ವಾಹನ ಸಂಚಾರ ಕಷ್ಟ ಸಾಧ್ಯ. ಹಾಗಾಗಿ ಕೈಕಂಬದ ಫ್ಲೈಓವರ್, ‘ಆರ್‌ಇ ವಾಲ್’ ಹೆದ್ದಾರಿಯ ಮಧ್ಯೆ ಕಂದಾವರ ಪಂಚಾಯಿತಿ ಕಡೆಗೆ ಸಾಗುವ ಪೋಂಪೈ ದ್ವಾರದ ಎದುರು ಒಂದು ಅಂಡರ್‌ಪಾಸ್ ನಿರ್ಮಿಸಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ. ಇದಕ್ಕಾಗಿ ಕೈಕಂಬದಲ್ಲಿ ಮತ್ತೊಂದು ನಾಗರಿಕ ಹೋರಾಟದ ಸೂಚನೆ ಕಂಡು ಬಂದಿವೆ.
ದುರಸ್ತಿಗೆ ಸ್ಥಳೀಯರಿಂದ ಆಗ್ರಹ
ಗುರುಪುರ ಕೈಕಂಬದಲ್ಲಿ ಮಳೆಗಾಲದಲ್ಲಿ ಕೃತಕ ಪ್ರವಾಹ ತುಂಬಿ ಹರಿದರೆ ಮಳೆ ನಿಲ್ಲುತ್ತಲೇ ರಸ್ತೆ ಅಪ್ಪದ ಕಾವಲಿಯಂತಾಗಿದೆ! ಇದರಿಂದ ವಾಹನ ಸಂಚಾರಕ್ಕೆ ಮತ್ತಷ್ಟು ಸಂಚಕಾರ ಎದುರಾಗಿದೆ. ಕೃತಕ ನೆರೆ ಇದ್ದಾಗ ಹೊಂಡ-ಗುಂಡಿ ರಸ್ತೆಗೆ ಲಾರಿಗಟ್ಟಲೆ ಜಲ್ಲಿ, ಜಲ್ಲಿ ಪುಡಿ ತುಂಬಿಸಲಾಗಿತ್ತು. ಈಗ ಜಲ್ಲಿ ಹಾರಿ ಹೋಗಿ, ರಸ್ತೆಯುದ್ದಕ್ಕೂ ಕುಳಿಗಳು ಸೃಷ್ಟಿಯಾಗಿವೆ. ಇಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಮುಂದುವರಿಯುವುದು ಸಾಹಸದ ಕೆಲಸವಾಗಿದೆ. ಇಂತಹ ದೃಶ್ಯ ಕೈಕಂಬಕ್ಕೆ ಹತ್ತಿರದ ವಿಕಾಸನಗರ, ಹೆದ್ದಾರಿಯ ಇನ್ನಿತರ ಕೆಲವು ಕಡೆಗಳಲ್ಲೂ ಕಾಣಬಹುದು. ಇಲ್ಲೆಲ್ಲ ತಕ್ಷಣದ ದುರಸ್ತಿ ಆಗಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.
ಗುರುಪುರ ಕೈಕಂಬದಲ್ಲಿ ನಿರ್ಮಾಣಗೊಳ್ಳುತ್ತಿರುವ 4+4 ಪಿಲ್ಲರ್‌ಗಳ(ಒಟ್ಟು 8 ಪಿಲ್ಲರ್) ಫ್ಲೈಓವರ್ ಸಂಪರ್ಕಿಸುವಂತೆ ‘ಆರ್‌ಇ ವಾಲ್’ ಹೆದ್ದಾರಿ ನಿರ್ಮಿಸಲಾಗುತ್ತಿದೆ. ‘ಆರ್‌ಇ ವಾಲ್’ ಹೆದ್ದಾರಿಗೆ 2 ಕಡೆ 14.5 ಮೀಟರ್ ಅಗಲದ ದ್ವಿಮುಖ ಸರ್ವೀಸ್ ರೋಡ್ ನಿರ್ಮಿಸಲಾಗಿದೆ. ಕೈಕಂಬದಲ್ಲಿ ಅಂಡರ್‌ಪಾಸ್ ಇಲ್ಲ. ಕಾಮಗಾರಿ ಮುಗಿಯುತ್ತಲೇ ಈಗ ಅಗಲ ಕಿರಿದಾಗಿ ಕಾಣುವ ಸರ್ವೀಸ್ ರೋಡ್ ಸರಿಯಾಗಲಿದೆ. ಆಗ ಕಂದಾವರದ ಕಡೆಗೆ ಹೋಗುವ ವಾಹನಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಮಳೆ ಕಡಿಮೆಯಾಗುತ್ತಲೇ ರಸ್ತೆ ದುರಸ್ತಿ ಕಾಮಗಾರಿ ಮುಂದುವರಿಯಲಿದೆ. ಅಬ್ದುಲ್ ಜಾವೇದ್ ಆಝ್ಮಿ ಎನ್‌ಎಚ್ ಪ್ರಾಜೆಕ್ಟ್ ಡೈರೆಕ್ಟರ್(ಪಿಡಿ)