

ರಟ್ಟಿಹಳ್ಳಿ: ಡಾ.ಬಿಆರ್.ಆಂಬೇಡ್ಕರ್ ಅವರ 250 ಅಡಿ ಎತ್ತರದ ಪ್ರತಿಮೆಯನ್ನು ರಾಜಧಾನಿ ಬೆಂಗಳೂರಿನ ಲಾಲ್ಬಾಗ್ ಉದ್ಯಾನದಲ್ಲಿ ನಿರ್ಮಾಣ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಜೆಟ್ನಲ್ಲಿ ಘೊಷಣೆ ಮಾಡಬೇಕು ಎಂದು ಕರ್ನಾಟಕ ಭೀಮ್ ಸೇನೆ ಸಂಘಟನೆಯ ಜಿಲ್ಲಾಧ್ಯಕ್ಷ ಬಸವರಾಜ ಎನ್.ಎಚ್. ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡ ಕರ್ನಾಟಕ ಭೀಮ್ ಸೇನೆ ಸಂಘಟನೆಯ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ದೇಶದಲ್ಲಿ ತೆಲಾಂಗಣ ರಾಜ್ಯದಲ್ಲಿ 125 ಅಡಿ ಎತ್ತರ ಮತ್ತು ಆಂಧ್ರಪ್ರದೇಶದಲ್ಲಿ 206 ಅಡಿ ಎತ್ತರದಲ್ಲಿ ನಿರ್ಮಾಣ ಮಾಡಿರುವ ಮಾದರಿಯಲ್ಲಿ ಬೆಂಗಳೂರಿನಲ್ಲಿ ನಿರ್ಮಾಣ ಮಾಡಲು ಈ ಬಾರಿಯ ಬಜೆಟ್ನಲ್ಲಿ ಘೊಷಣೆ ಮಾಡಬೇಕು. ಬೆಂಗಳೂರಿನ ಲಾಲ್ಬಾಗ್ ಸುಮಾರು 245 ಎಕರೆ ವಿಶಾಲವಾಗಿದ್ದು ಪ್ರತಿಮೆ ನಿರ್ವಣಕ್ಕೆ ಇದು ಸೂಕ್ತ ಸ್ಥಳವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಮನವಿಗೆ ಸ್ಪಂದಿಸಬೇಕು ಎಂದರು.
ಕಳೆದ 1 ವರ್ಷದಿಂದ ರಾಜ್ಯ ವ್ಯಾಪಿ ಎಲ್ಲ 30 ಜಿಲ್ಲಾಧಿಕಾರಿಗಳಿಗೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ, ಗೃಹ ಮಂತ್ರಿ ಪರಮೇಶ್ವರ, ಪ್ರಿಯಾಂಕ ಖರ್ಗೆ, ಸತೀಶ ಜಾರಕಿಹೊಳಿ ಅವರಿಗೆ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಶಂಕರ ರಾಮಲಿಂಗಯ್ಯ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದೆ. ಆದ್ದರೀಂದ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿ ಪ್ರತಿಮೆ ನಿರ್ವಣಕ್ಕೆ ಬಜೆಟ್ನಲ್ಲಿ ಘೊಷಣೆ ಮಾಡಬೇಕೆಂದು ಹೇಳಿದರು.
ಸಂಘಟನೆಯ ಗೌರವಾಧ್ಯಕ್ಷ ರಾಜು ಮುಕಣ್ಣನವರ, ರಾಮಪ್ಪ ಮಾದಾಪುರ, ಕಾಂತೇಶ ಹಂಚಿಮನಿ, ಕುಮಾರ ಹರಿಜನ, ಪ್ರವೀಣ ಗುಡ್ಡದಮಾದಾಪುರ, ಗುರುರಾಜ ಹರಿಜನ, ನಾಗರಾಜ ಬತ್ತಿಕೊಪ್ಪ, ರಾಮಚಂದ್ರಪ್ಪ ಹಿಂಡಸಗಟ್ಟಿ ಇತರರು ಇದ್ದರು.