

ಪಾಂಡವಪುರ: ತಾಲೂಕಿನ ಬನಘಟ್ಟ ಗ್ರಾಮದ ಬಳಿ ಶ್ರೀರಂಗಪಟ್ಟಣ-ಜೇವರ್ಗಿ ಮುಖ್ಯ ಹೆದ್ದಾರಿಗೆ ನಿರ್ಮಿಸಿರುವ ರಸ್ತೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಉದ್ಘಾಟನೆ ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್ ನೇತೃತ್ವದಲ್ಲಿ ರೈತರು, ಸಾರ್ವಜನಿಕರು ಗುರುವಾರ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಬನಘಟ್ಟ ಗೇಟ್ ಬಳಿ ಜಮಾಯಿಸಿದ ರೈತರು, ಸಾರ್ವಜನಿಕರು ಮುಖ್ಯಹೆದ್ದಾರಿ ಸಂಚಾರವನ್ನು ತಡೆದು ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಆಕ್ರೋಶ ಹೊರಹಾಕಿದರು.
ಬನಘಟ್ಟ ಗೇಟಿನ ಬಳಿ ನಿರ್ಮಿಸಲಾಗಿರುವ ಸೇತುವೆ ಕಾಮಗಾರಿ ಮಂಧಗತಿಯಲ್ಲಿ ಸಾಗುತ್ತಿವೆ. ಇದರಿಂದಾಗಿ ರಸ್ತೆ ಕಾಮಗಾರಿ ಸಹ ವಿಳಂಬವಾಗುತ್ತಿದೆ. ವಾಹನ ಸವಾರರಿಗೆ ಅನನುಕೂಲ ಉಂಟಾಗುತ್ತಿದೆ. ಈ ಸ್ಥಳದಲ್ಲಿ ಹೆಚ್ಚು ರಸ್ತೆ ಅಪಘಾತಗಳು ನಡೆಯುತ್ತಿದ್ದು, ಸಾವು ನೋವು ಸಂಭವಿಸುತ್ತಿವೆ ಎಂದು ಕಿಡಿಕಾರಿದರು.
ಸೇತುವೆ ಕಾಮಗಾರಿ ಆರಂಭಗೊಂಡು ಐದಾರು ವರ್ಷಗಳೇ ಕಳೆದಿವೆ, ಆದರೂ ಈವರೆಗೂ ಕಾಮಗಾರಿಯನ್ನು ಗುತ್ತಿಗೆದಾರರಿಗೆ ಒತ್ತಡ ತಂದು ಪೂರ್ಣಗೊಳಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಸೇತುವೆ ಬಳಿ ಇರುವ ಹಳೇ ರಸ್ತೆ ತಿರುವು ಇರುವುದರಿಂದ ವೇಗವಾಗಿ ಬರುವ ವಾಹನಗಳಿಗೆ ರಸ್ತೆ ಸರಿಯಾಗಿ ಗೋಚರಿಸದೆ ಅವಘಡಗಳು ಸಂಭವಿಸುತ್ತಿವೆ. ಇದೇ ಸ್ಥಳದಲ್ಲಿ ಕಳೆದ ವರ್ಷ ಕಾರು ವಿಸಿ ನಾಲೆಗೆ ಉರುಳಿ ನಾಲ್ಕೈದು ಜನ ಮೃತಪಟ್ಟಿದ್ದರು, ಜತೆಗೆ ಸಾಕಷ್ಟು ಸಾವು ನೋವುಗಳು ಸಂಭವಿಸಿವೆ. ಆ ಸಂದರ್ಭದಲ್ಲಿ ಆಗಮಿಸಿದ ಅಧಿಕಾರಿಗಳು ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಹಾಗಾಗಿ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೇತುವೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಪಟ್ಟುಹಿಡಿದರು.
ಸ್ಥಳಕ್ಕೆ ಗುತ್ತಿಗೆದಾರರ ಕಡೆಯ ಅಧಿಕಾರಿ ಆಗಮಿಸಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಎಚ್.ಎನ್.ಮಂಜುನಾಥ್, ದೊರೆಸ್ವಾಮಿ, ಬಾಲಗಂಗಾಧರ್, ಚನ್ನಕೇಶವ, ಶ್ರೀನಿವಾಸ್, ಭಾಸ್ಕರ್, ಅನಿಲ್, ಪುಟ್ಟು, ಮಂಜು, ಪರಮೇಶ್, ಮನು ಸೇರಿದಂತೆ ಹಲವರು ಇದ್ದರು.