ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯ

25
Published on

ಮೈಸೂರು: ಜಮೀನು ಪಡೆದ ಪಾರ್ಲೆ ಆಗ್ರೋ ಕಂಪನಿಯಿಂದ ಉದ್ಯೋಗ ಸಿಗಲಿಲ್ಲ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡ ಯುವ ರೈತ ಸಿದ್ದರಾಜು ಕುಟುಂಬಕ್ಕೆ ನ್ಯಾಯ ಸಿಗಬೇಕು ಹಾಗೂ ಕಂಪನಿ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸೋಮವಾರ ರೈತರು ಹಾಗೂ ಗ್ರಾಮಸ್ಥರು ಶವಾಗಾರದ ಮುಂದೆ ಪ್ರತಿಭಟನೆ ನಡೆಸಿದರು.

ಯುವ ರೈತ ಸಿದ್ಧರಾಜು ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿದ ರೈತ ಸಂಘದ ಮುಖಂಡರುಗಳು, ಮೈಸೂರಿನ ಕೆ.ಆರ್.ಆಸ್ಪತ್ರೆ ಶವಾಗಾರದ ಬಳಿಗೆ ಆಗಮಿಸಿ ಶವಪರೀಕ್ಷೆ ಮಾಡದಂತೆ ಪ್ರತಿಭಟಿಸಿ, ಮೃತ ಸಿದ್ಧರಾಜು ಕುಟುಂಬಕ್ಕೆ ನ್ಯಾಯ ದೊರೆಯಬೇಕು. ಕಂಪನಿ ಮಾಲೀಕರು ಸ್ಥಳಕ್ಕೆ ಬಂದು ಪರಿಹಾರ ನೀಡಬೇಕು, ಮೃತನ ಪತ್ನಿಗೆ ಖಾಯಂ ನೌಕರಿ ನೀಡಬೇಕು ಎಂದು ಆಗ್ರಹಿಸಿದರು.

ಜಮೀನು ಪಡೆದ ಕಂಪನಿಗೆ ಕೆಲಸ ಕೊಡುವಂತೆ ಕೇಳಿದ ಸಿದ್ದರಾಜು ಅವರ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿದ್ಧರಾಜು ಅವರಿಗೆ ಸೇರಿದ ಭೂಮಿಯನ್ನು ಕೆಐಎಡಿಬಿಗೆ ಕೊಟ್ಟಿದ್ದಾರೆ. ಅವರಿಗೆ ಅಷ್ಟಾಗಿ ಪರಿಹಾರ ದೊರಕಲಿಲ್ಲ. ಈ ವೇಳೆ ಕೆಲಸ ಕೊಡುವುದಾಗಿ ಕೆಐಎಡಿಬಿಯವರು ಹೇಳಿದ್ದರು. ಆದರೆ ಪಾರ್ಲೆ ಕಂಪನಿ ಜಿಲ್ಲಾಧಿಕಾರಿ, ಕೆಐಎಡಿಬಿ ಅಧಿಕಾರಿಗಳು ಹೇಳಿದರೂ ಉದ್ಯೋಗ ನೀಡಲಿಲ್ಲ. ಇದರಿಂದ ಬೇಸತ್ತ ಸಿದ್ಧರಾಜು ನಂಜನಗೂಡು ತಹಶೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೂ ನಾಲ್ಕು ವರ್ಷಗಳಿಂದ ಅಲೆದಾಡಿದ್ದಾರೆ. ಇಲ್ಲೂ ನ್ಯಾಯ ಸಿಗದೇ ಕಂಪನಿಯ ಪಕ್ಕದಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಆಗ ಪೊಲೀಸರು ಮಧ್ಯಪ್ರವೇಶಿಸಿ ಆತನ ವಿರುದ್ಧ ಕೇಸು ದಾಖಲಿಸಿದ್ದಾರೆ. ಇದರಿಂದ ಮನನೊಂದ ಸಿದ್ದರಾಜು ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಮೃತನ ತಂದೆ, ತಾಯಿ, ಪತ್ನಿ, ಸಹೋದರ, ಪ್ರಗತಿಪರ ಚಿಂತಕ ಉಗ್ರನರಸಿಂಹೇಗೌಡ, ರೈತ ಮುಖಂಡ ಹೊಸಕೋಟೆ ಬಸವರಾಜು, ಸಿಐಟಿಯು ಚಂದ್ರಶೇಖರ ಮೇಟಿ, ಬೊಕ್ಕಹಳ್ಳಿ ನಂಜುಂಡಸ್ವಾಮಿ, ಶಿರಮಳ್ಳಿ ಸಿದ್ದಪ್ಪ, ಹೆಜ್ಜಿಗೆ ಪ್ರಕಾಶ್, ಬಸವರಾಜು, ಪ್ರೇಮ್‌ಕುಮಾರ್, ಮರಂಕಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net