ಚಂದ್ರಶೇಖರ್ ಕುಟುಂಬಕ್ಕೆ ಪರಿಹಾರ ಕಲ್ಪಿಸಲು ಆಗ್ರಹ

kse
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ರಾಷ್ಟ್ರಭಕ್ತರ ಬಳಗದಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಕೆ.ಎಸ್.ಈಶ್ವರಪ್ಪ, ಕೆ.ಇ.ಕಾಂತೇಶ್, ಶಂಕರ್‌ಗನ್ನಿ, ಎಂ.ಶಂಕರ್, ಸುವರ್ಣಾ ಶಂಕರ್, ಇ.ವಿಶ್ವಾಸ್ ಇತರರಿದ್ದರು.
Published on

ಶಿವಮೊಗ್ಗ: ಆತ್ಮಹತ್ಯೆಗೆ ಶರಣಾಗಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಕುಟುಂಬಕ್ಕೆ ಈಗಾಗಲೇ ಸರ್ಕಾರ ಪರಿಹಾರ ಘೋಷಿಸಿದ್ದರೂ ಈವರೆಗೂ ಬಿಡುಗಡೆ ಮಾಡಿಲ್ಲ. ಕೂಡಲೇ ಪರಿಹಾರ ನೀಡುವಂತೆ ಒತ್ತಾಯಿಸಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ರಾಷ್ಟ್ರಭಕ್ತರ ಬಳಗದಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಚಂದ್ರಶೇಖರನ್ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ವಿಧಾನಮಂಡಲದ ಅಧಿವೇಶನದಲ್ಲೇ ಘೋಷಿಸಿದ್ದರು. ಈಗ ಮೂರು ತಿಂಗಳು ಕಳೆದರೂ ಕುಟುಂಬಕ್ಕೆ ನೆರವು ನೀಡಿಲ್ಲ. ಚಂದ್ರಶೇಖರನ್ ಪತ್ನಿ ಕವಿತಾ ಈಗಾಗಲೇ ಜಿಲ್ಲಾಧಿಕಾರಿಗೂ ಮನವಿ ನೀಡಿದ್ದಾರೆ. ಆ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದೆ ಎಂದು ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಸೆ.10ರೊಳಗೆ ಸರ್ಕಾರ ಪರಿಹಾರ ನೀಡದಿದ್ದರೆ ರಾಷ್ಟ್ರಭಕ್ತರ ಬಳಗ ಸಾರ್ವಜನಿಕರ ನೆರವಿನೊಂದಿಗೆ ಆ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲಿದೆ. ಸೆ.20ರೊಳಗೆ ಪರಿಹಾರ ನೀಡದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ರಾಷ್ಟ್ರಭಕ್ತರೊಂದಿಗೆ ಮುತ್ತಿಗೆ ಹಾಕಿ ಜೈಲ್ ಭರೋ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸರ್ಕಾರ ಚಂದ್ರಶೇಖರನ್ ಕುಟುಂಬದ ನೋವಿಗೆ ಸ್ಪಂದಿಸಿಲ್ಲ. ಪರಿಶಿಷ್ಟ ಜಾತಿ, ಪಂಗಡಗಳ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಂಡಿದೆ. ನಮ್ಮ ಹೋರಾಟ ರಾಜಕೀಯಕ್ಕಾಗಿ ಅಲ್ಲ. ಕವಿತಾ ಕುಟುಂಬದೊಂದಿಗೆ ನಾವೆಲ್ಲರೂ ಇದ್ದೇವೆ. ಸರ್ಕಾರಕ್ಕೆ ಕಿಂಚಿತ್ತಾದರೂ ಕಾಳಜಿ ಇದ್ದರೆ ಕುಟುಂಬಕ್ಕೆ ಆದ ಅನ್ಯಾಯ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಮೋಹನ್‌ರಾವ್ ಜಾಧವ್ ಮಾತನಾಡಿ, ದನಗಳ್ಳ ಮೃತಪಟ್ಟಾಗ ತಕ್ಷಣ 25 ಲಕ್ಷ ರೂ. ಬಿಡುಗಡೆ ಮಾಡಲು ಸರ್ಕಾರದ ಬಳಿ ಹಣವಿದೆ. ಮೈಸೂರು ಮತ್ತು ಬೆಂಗಳೂರಿನಲ್ಲಿ ರಾಜಕೀಯ ಸಮಾವೇಶ ಮಾಡಲು ಸರ್ಕಾರದ ಬಳಿ ಹಣವಿದೆ. ಆದರೆ ಪ್ರಾಮಾಣಿಕ ಅಧಿಕಾರಿ ಹಗರಣವನ್ನು ಬಯಲಿಗೆಳೆದು ಆತ್ಮಹತ್ಯೆ ಮಾಡಿಕೊಂಡರೆ ಆತನ ಕುಟುಂಬಕ್ಕೆ ಘೋಷಿಸಿದ ಪರಿಹಾರ ನೀಡಲು ಸರ್ಕಾರದ ಬಳಿ ಹಣವಿಲ್ಲವೇ ಎಂದು ಪ್ರಶ್ನಿಸಿದರು.
ಪ್ರಮುಖರಾದ ಕೆ.ಇ.ಕಾಂತೇಶ್, ಎಂ.ಶಂಕರ್, ಶಂಕರ್‌ಗನ್ನಿ, ದೊರೆ ಚಿನ್ನಪ್ಪ, ಶಶಿಕಲಾ, ಇ.ವಿಶ್ವಾಸ್, ಸುವರ್ಣಾ ಶಂಕರ್, ಸುರೇಖಾ, ಬಾಲು, ಅ.ಮ.ಪ್ರಕಾಶ್, ಮೋಹನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net