

ನರಗುಂದ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬೆಳೆದಿದ್ದ ಹೆಸರು ಬೆಳೆ ನಿರಂತರ ಮಳೆಗೆ ಸಂಪೂರ್ಣ ಹಾನಿಯಾಗಿದೆ. ರಾಜ್ಯ ಸರ್ಕಾರ ಪ್ರತಿ ಎಕರೆಗೆ 70 ಸಾವಿರ ರೂ. ಪರಿಹಾರ ನೀಡುವಂತೆ ಕಳಸಾ-ಬಂಡೂರಿ ಹೋರಾಟಗಾರ ವಿಜಯ ಕುಲಕರ್ಣಿ ಆಗ್ರಹಿಸಿದರು.
ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರೈತರ ಸಭೆಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಗದಗ, ಧಾರವಾಡ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳ ರೈತರು ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆ ಬೆಳೆದಿದ್ದರು. ಬಿತ್ತನೆ ಬೀಜ, ಗೊಬ್ಬರ, ಕ್ರಿಮಿನಾಶಕ ಔಷಧ, ಕಾರ್ಮಿಕರ ಕೂಲಿ ಸೇರಿ ಪ್ರತಿ ಎಕರೆಗೆ 20 ರಿಂದ 25 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ. ಆದರೆ, ಹೂವು ಕಟ್ಟುವಾಗ ಮಳೆಯಿಲ್ಲದಂತಾಯಿತು. ಕಾಲುವೆ ನೀರಿನಿಂದ ಸಮೃದ್ಧವಾಗಿ ಬೆಳೆದಿದ್ದ ಬಹುತೇಕ ಬೆಳೆಗಳು ಕಟಾವು ಹಂತದಲ್ಲಿರುವಾಗ ವಿಪರೀತ ಮಳೆ ಸುರಿದು ಹಾನಿಯುಂಟಾಗಿದೆ. ಕೆಲ ರೈತರ ಜಮೀನಿನಲ್ಲಿ ಅಪಾರ ಪ್ರಮಾಣದ ನೀರು ನಿಂತು ಕ್ರಿಮಿನಾಶಕ ಸಿಂಪಡಣೆ ಮಾಡಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆಕಸ್ಮಾತ್ ಮಳೆ ನಿಂತರೂ ಅಳಿದುಳಿದ ಹೆಸರು ಬೆಳೆ ಬಿಡಿಸುವಾಗ ಸಂಪೂರ್ಣ ಸಿಡಿ ಹಾಯ್ದು ಫಸಲು ಹಾಳಾಗುತ್ತದೆ. ದೀರ್ಘಾವಧಿ ಬೆಳೆಗಳಾದ ಗೋವಿನಜೋಳ, ಹತ್ತಿ ಬೆಳೆಗಳಿಗೆ ಸರ್ಕಾರ ಸಮರ್ಪಕ ಯೂರಿಯಾ ರಸಗೊಬ್ಬರ ಪೂರೈಸುತ್ತಿಲ್ಲ. ಸರ್ಕಾರದ ನಿರ್ಲಕ್ಷ್ಯಕ್ಕೆ ಕೆಲವೆಡೆ ಕೃತಕ ರಸಗೊಬ್ಬರದ ಅಭಾವ ಸೃಷ್ಟಿಯಾಗಿದೆ. ಇದಕ್ಕೆ ಸರ್ಕಾರವೇ ನೇರ ಹೊಣೆ. ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ನಿಗದಿತ ಅವಧಿಯಲ್ಲಿ ಬೆಳೆಹಾನಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಬಸವರಾಜ ಪವಾರ, ಎಚ್.ಎಂ. ತಹಸೀಲ್ದಾರ್, ಶಿವಪ್ಪ ಪವಾರ, ಶ್ರೀಶೈಲ್ ಸವದಿ, ಧರಿಯಪ್ಪ ಜಾಧವ, ನಬಿಸಾಬ ಖಲೀಫ, ಫಕೀರಪ್ಪ ದ್ಯಾವನೂರ, ಕುಡ್ಲಪ್ಪ ಕುಂಬಾರ, ಮಹೇಶ ಹಟ್ಟಿ, ವಿಠ್ಠಲ ಮಾಣಿಕ್, ದಶರಥ ಕುಠೋಳೆ, ಬಾಪುಗೌಡ ಹಿರೇಗೌಡ್ರ, ಶಂಕರಗೌಡ ಚನ್ನಪ್ಪಗೌಡ್ರ, ರಾಚನಗೌಡ ಪಾಟೀಲ, ಚನ್ನಪ್ಪಗೌಡ ಪಾಟೀಲ, ಜಡಿಯಪ್ಪಗೌಡ ಚನ್ನಪ್ಪಗೌಡ್ರ, ಶಿವನಗೌಡ ಸಾಲೂಟಗಿ, ಇತರರು ಉಪಸ್ಥಿತರಿದ್ದರು.