

ನಂಜನಗೂಡು: ಕಪಿಲಾ ನದಿ ವ್ಯಾಪ್ತಿಯಲ್ಲಿ ಬೆಳೆದಿರುವ ಫಸಲು ನಷ್ಟಕ್ಕೆ ರೈತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ನಂಜನಗೂಡಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಂಜನಗೂಡು ನಗರದ ತಾಲೂಕು ಆಡಳಿತ ಭವನದ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಪದಾಧಿಕಾರಿಗಳು ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ವಿದ್ಯಾಸಾಗರ್ ಮಾತನಾಡಿ, ಕೇರಳದ ವಯನಾಡಿನಲ್ಲಿ ವ್ಯಾಪಕ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಕಬಿನಿ ಜಲಾಶಯದಿಂದ 25 ಸಾವಿರ ಕ್ಯೂಸೆಕ್ ನೀರನ್ನು ಕಪಿಲಾ ನದಿಗೆ ಬಿಡಲಾಗಿದೆ. ಇದರಿಂದ ಹುಲ್ಲಹಳ್ಳಿ, ರಾಂಪುರ ಬಯಲಿನಲ್ಲಿ 15 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಫಸಲನ್ನು ರೈತರು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ರೈತರಿಗೆ ವೈಜ್ಞಾನಿಕ ಪರಿಹಾರ ನೀಡಬೇಕು. ಅತಿವೃಷ್ಟಿ-ಅನಾವೃಷ್ಟಿಯಿಂದ ಆದ ಬೆಳೆ ನಷ್ಟಕ್ಕೆ ಮತ್ತು ಕಾಡುಪ್ರಾಣಿಗಳಿಂದ ಆಗುತ್ತಿರುವ ಪ್ರಾಣ ಹಾನಿಗೆ ಬಜೆಟ್‌ನಲ್ಲಿ 10 ಸಾವಿರ ಕೋಟಿ ರೂ. ಪರಿಹಾರ ನಿಧಿ ಕಾಯ್ದಿರಿಸಬೇಕು. ರೈತರು ಒಂದು ಎಕರೆ ಭತ್ತ ಬೆಳೆಯಲು 25 ಸಾವಿರಕ್ಕೂ ಹೆಚ್ಚು ಹಣ ಖರ್ಚಾಗುತ್ತಿದೆ. ಕನಿಷ್ಠ 50 ಸಾವಿರ ರೂ. ಪರಿಹಾರವನ್ನು ನೀಡಬೇಕು. ಸರ್ಕಾರಿ ಗೋಮಾಳ ಸಂರಕ್ಷಿಸಿ, ಸಮೃದ್ಧವಾದ ಮೇವಿನ ಬೆಳೆಯನ್ನು ಬೆಳೆಯಲು ಪಶು ಸಂಗೋಪನಾ ಇಲಾಖೆ ಗಮನಹರಿಸಬೇಕು. ಕಪಿಲಾ ನದಿ ಪ್ರವಾಹದಿಂದ ಪ್ರತಿವರ್ಷ ಹಾನಿಯಾಗುತ್ತಿದ್ದು, ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹಿಸಿದರು. ಬಳಿಕ ಕಂದಾಯ ಸಚಿವರು, ಮುಖ್ಯಮಂತ್ರಿಗಳಿಗೆ ತಹಸೀಲ್ದಾರ್ ಮೂಲಕ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಸತೀಶ್ ರಾವ್, ಇಮ್ಮವು ರಘು, ಶಂಕರ್ ನಾಯಕ, ಶ್ವೇತಾ, ಮಹದೇವ ನಾಯಕ, ಹೆಡತಲೆ ಮಹದೇವ ನಾಯಕ, ಯೋಗಿ, ಅಹಲ್ಯಾ ಸಿದ್ದರಾಜು, ರಂಗಸ್ವಾಮಿ ನಾಯಕ, ಕೃಷ್ಣ, ಸಿಂಧುವಳ್ಳಿ ಮಹದೇವ ನಾಯಕ, ತಿಮ್ಮನಾಯಕ, ಪ್ರಕಾಶ್ ಇತರರು ಇದ್ದರು.