ಅಕಾಲಿಕ ಮಳೆದ ಬೆಳೆ ಹಾಳು ಪರಿಹಾರಕ್ಕೆ ಒತ್ತಾಯ

SHARANAPPA MARALI
SHARANAPPA MARALI
Published on

ರಾಯಚೂರು ಜಿಲ್ಲೆಯಲ್ಲಿ ಇತ್ತೀಚಗೆ ಆದ ಅಕಾಲಿಕ ಮಳೆಯಿಂದಾಗಿ ಭತ್ತದ ಬೆಳೆ ಸಂಪೂರ್ಣ ನಾಶವಾಗಿದ್ದು, ಕೂಡಲೇ ಜಿಲ್ಲಾಡಳಿತ ಹಾಗೂ ಸರ್ಕಾರ ಬೆಳೆ ಹಾನಿ ಸರ್ವೆ ಕಾರ್ಯ ನಡೆಸಿ ಪರಿಹಾರ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಶರಣಪ್ಪ ಮರಳಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಕೆಲವು ದಿನಗಳ ಹಿಂದೆ ಜಿಲ್ಲೆಯ ಮಸ್ಕಿ, ತಾಲೂಕಿನ ಬಳಗನೂರು ಹೋಬಳಿಯ ಗೌಡನಭಾವಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಅಕಾಲಿಕ ಆಲಿಕಲ್ಲು ಮಳೆಗೆ ಸಾವಿರಾರು ಎಕರೆ ಭತ್ತದ ಬೆಳೆ ನೆಲಕ್ಕಚ್ಚಿ ಹಾನಿಗೊಳಗಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಕೂಡಲೇ ಎಕರೆಗೆ ೫೦ ಸಾವಿರ ಪರಿಹಾರ ನೀಡಬೇಕು.

ಈಗಾಗಲೇ ಮಾರುಕಟ್ಟೆಯಲ್ಲಿ ಭತ್ತದ ಬೆಲೆ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಮಾರಾಟವಾಗುತ್ತಿದ್ದು, ಕೂಡಲೇ ಭತ್ತದ ಖರೀದಿಯಲ್ಲಿ ಇರುವ ಷರತ್ತುಗಳನ್ನು ಹಿಂಪಡೆಯಬೇಕು. ತೆಲಂಗಾಣ ರಾಜ್ಯ ಸರ್ಕಾರ ಘೋಷಿಸಿದಂತೆ ಬೆಂಬಲ ಬೆಲೆ ಜೊತೆಗೆ ೫೦೦ ರೂ.ಪ್ರೊ ಧನ ಸೇರಿಸಿ ಪ್ರತಿ ಕ್ವಿಂಟಾಲ್‌ಗೆ ೩ ಸಾವಿರ ರೂ.ಗೆ ಖರೀದಿ ಮಾಡಬೇಕು. ವಾರದೊಳಗೆ ಹಣ ಜಮೆ ಮಾಡಬೇಕು ಎಂದು ಒತ್ತಾಯಿಸಿದರು.

ಈ ಬಗ್ಗೆ ಸ್ಪಂಽಸಬೇಕಾದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.

ರೈತರ ಸಮಸ್ಯೆಗಳ ಬಗ್ಗೆ ಗಮನ ಹರಿಸದೇ, ರೈತರಿಗೆ ಮೋಸ ಮಾಡುತ್ತಿವೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹಾಗೂ ಆಡಳಿತ ಹಾಘೂ ವಿರೋಧ ಪಕ್ಷಗಳು ರೈತರ ಪಾಲಿಗೆ ಸತ್ತು ಹೋಗಿವೆ ಎಂದು ಆಕ್ರೋಶ ವ್ಯಕ್ತಪಡಿ ಸಿದರು. ಜೋಳ ಖರೀದಿಯಲ್ಲಿಯೂ ತಾರತಮ್ಯ ತೋರಲಾಗುತ್ತಿದೆ. ಕೂಡಲೇ ಸರ್ಕಾರ ಜೋಳ ಖರೀದಿಯನ್ನು ಪಾರದರ್ಶಕವಾಗಿ ಹಾಗೂ ನಿಯಮಾನುಸಾರವಾಗಿ ಮಾಡಬೇಕು ಮತ್ತು ಜೋಳ ಖರೀದಿ ಹಣವನ್ನು ರೈತರಿಗೆ ತ್ವರಿತವಾಗಿ ಜಮಾ ಮಾಡಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ರಾಮಯ್ಯ ಜವಳಗೇರಾ, ಚನ್ನಪ್ಪ ಹುಣಸಿಹಾಳಹುಡಾ, ನಿಂಗಪ್ಪ ವಡ್ಲೂರು, ನಾಗೇಂದ್ರಪ್ಪ ಚೆರ್‌ಮನ್, ಲಾಲ್‌ಸಾಬ್ ನಾಡಗೌಡ, ನರಸಿಂಹರಾವ್ ಬಾಲಯ್ಯ ಕ್ಯಾಂಪ್, ನಿಂಗನಗೌಡ ಹಾರಾಪುರ, ಕರಿಯಪ್ಪ ಮುಕ್ಕುಂದಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net