

ವಿಜಯಪುರ: ಮುಡಾ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದರು.
ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಹಾಗೂ ಮುಖಂಡರು ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು. ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಆಗ್ರಹಿಸಿದರು.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಮಾತನಾಡಿ, ಮುಡಾದಲ್ಲಿ ಅಕ್ರಮವಾಗಿ 14 ಸೈಟ್ ಪಡೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿವೇಶನದಲ್ಲಿ ಬಿಜೆಪಿಯಿಂದ ನಿಲುವಳಿ ಸೂಚನೆಗೆ ಉತ್ತರ ಕೊಡದೆ ಪಲಾಯಾನಗೈದರು. ರಾಮಕೃಷ್ಣ ಹೆಗಡೆ, ದೇವೇಗೌಡ, ಪಟೇಲ್ ಅವರಂತಹ ಮೌಲ್ಯಯುತ ರಾಜಕಾರಣಿಗಳ ಸಂಸ್ಕಾರದಲ್ಲಿ ಬೆಳೆದ ಸಿದ್ಧರಾಮಯ್ಯನವರಿಗೆ ಆಪಾದನೆ ಹೊತ್ತು ಅಧಿಕಾರ ಚಲಾಯಿಸುವುದು ಶೋಭೆ ತರುವಂಥದಲ್ಲ. ಹೀಗಾಗಿ ಕೂಡಲೇ ಅಧಿಕಾರದಿಂದ ಕೆಳಗೆ ಇಳಿಯಬೇಕೆಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಪದವಿ ನಿಮ್ಮ ಅಥವಾ ಕಾಂಗ್ರೆಸ್‌ನ ಆಸ್ತಿ ಅಲ್ಲ. ಅದು ರಾಜ್ಯದ 7 ಕೋಟಿ ಕನ್ನಡಿಗರ ಜನರ ಸೇವೆಗೆ ಇರುವ ಅವಕಾಶ. ಪ್ರತಿ ಸಲ ತಮಗೆ 136 ಸ್ಥಾನ ಬಂದಿವೆ ಎನ್ನುವ ಕಾಂಗ್ರೆಸ್ಸಿಗರು ಅಷ್ಟು ಬಹುಮತ ಬಂದರೆ ನೀವು ಮಾಡಿದ ತಪ್ಪನ್ನು ಕ್ಷಮಿಸಬೇಕೆ? ರಾಜ್ಯಪಾಲರ ವಿರುದ್ಧ ಮಾತನಾಡಿ ದಬ್ಬಾಳಿಕೆ ಮಾಡಿದ್ದೀರಿ, ಆದರೆ ಹೈಕೋರ್ಟ್ ರಾಜ್ಯಪಾಲರ ನಿರ್ಣಯವನ್ನು ಎತ್ತಿ ಹಿಡಿದಿದೆ. 30 ಗಂಟೆ ವಾದ-ವಿದಾದ ನಡೆದು ತಾವು ಪಡೆದ ಸೈಟ್‌ಗಳು ಅಕ್ರಮ ಎಂದು ತನಿಖೆಗೆ ಆದೇಶಿಸಿದೆ. ಆದ್ದರಿಂದ ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ ಮಾತನಾಡಿ, ಸಿಎಂ ಸೇರಿದಂತೆ ಕಾಂಗ್ರೆಸ್ ನಾಯಕರು ಸಂವಿಧಾನದ ಪುಸ್ತಕ ಕೈಯಲ್ಲಿ ಹಿಡಿದು ಹೋಗುತ್ತಿದ್ದರು. ಇದೇ ಏನು ನೀವು ಸಂವಿಧಾನಕ್ಕೆ, ಕಾನೂನಿಗೆ ಕೊಡುವ ಬೆಲೆ ? ಎಂದು ವ್ಯಂಗ್ಯವಾಡಿದರು.
ಮುಡಾದಲ್ಲಿ ಅಕ್ರಮವಾಗಿ ನಿವೇಶನ ಪಡೆದಿದ್ದಾಗಿ ಹೈಕೋರ್ಟ್ ತನಿಖೆಗೆ ಆದೇಶಿಸಿದರೂ ನೀವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದೆ ಭಂಡತನ ಪ್ರದರ್ಶನ ಮಾಡುತ್ತಿರುವುದು ಸರಿಯಲ್ಲ ಎಂದರು.
ಮುಖಂಡರಾದ ವಿಜುಗೌಡ ಪಾಟೀಲ, ಕಾಸುಗೌಡ ಬಿರಾದಾರ, ಮುಳುಗುಡ ಪಾಟೀಲ, ಈರಣ್ಣ ರಾವೂರ್, ಸಾಬು ಮಾಶಾಳ, ಸಂಜಯ ಐಹೊಳೆ, ಉಮೇಶ ಕೋಳಕೂರ, ಗೋಪಾಲ ಘಟಕಾಂಬಳೆ, ಶಂಕರ ಹೂಗಾರ, ರಾಹುಲ ಜಾಧವ, ರವಿಕಾಂತ ಬಗಲಿ, ಗುರುಲಿಂಗಪ್ಪ ಅಂಗಡಿ, ಮಹೇಂದ್ರ ನಾಯಕ, ಸುರೇಶ ಬಿರಾದಾರ, ಈರಣ್ಣ ಪಟ್ಟಣಶೆಟ್ಟಿ, ಭೀಮಾಶಂಕರ ಹದನೂರು, ಶೀಲವಂತ ಉಮರಾಣಿ, ಬಸವರಾಜ ಹೂಗಾರ, ಚಿದಾನಂದ ಚಲವಾದಿ, ಸಪ್ನಾ ಕಣ್ಮುಚ್ಚಿನಾಳ, ಮಲ್ಲಮ್ಮ ಜೋಗೂರು, ಲಕ್ಷ್ಮಿ ಕನ್ನೊಳ್ಳಿ, ಗೀತಾ ಕುಕನೂರು, ಕಾಂತು ಸಿಂಧೆ, ವಿಜಯ ಜೋಶಿ, ಭರತ ಕೋಳಿ, ದೇವೇಂದ್ರ ಕುಂಬಾರ, ಅನೀಲ ಉಪ್ಪಾರ, ಪ್ರವೀಣ ನಾಟೀಕಾರ ಮತ್ತಿತರರಿದ್ದರು.