ಜಮೀನಿನಲ್ಲಿನ ತ್ಯಾಜ್ಯ ತೆರವುಗೆ ಆಗ್ರಹ

Published on

ಬಳ್ಳಾರಿ : ತುಂಗಾ ಹಾಗೂ ಭದ್ರಾ ಮೈನ್ಸ್ ಕಂಪನಿಗಳು ಅಕ್ರಮವಾಗಿ ಜಮೀನಿನಲ್ಲಿ ಸಂಗ್ರಹಿಸಿರುವ ತ್ಯಾಜ್ಯ ತೆರವುಗೊಳಿಸಬೇಕು ಎಂದು ಪಿಟಿಸಿಎಲ್ ಕಾಯಿದೆ ಭೂಮಿ ವಂಚಿತರ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಮಂಜುನಾಥ ಒತ್ತಾಯಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು, ಸಂಡೂರು ತಾಲೂಕಿನ ತಾರಾನಗರ ಗ್ರಾಮದ ಸರ್ವೆ ನಂ. 94/4ರ 4.13 ಎಕರೆಯ ಜಮೀನು ಹರಿಜನ ದೊಡ್ಡ ಸಕ್ರಪ್ಪ ಎಂಬುವರಿಗೆ ಸರ್ಕಾರ 1982ರಲ್ಲಿ ಅಧಿಕೃತವಾಗಿ ಮಂಜೂರುಗೊಳಿಸಿದೆ. ಇಂದಿಗೂ ಕಂದಾಯ ದಾಖಲೆಗಳಲ್ಲಿ ಹರಿಜನ ದೊಡ್ಡ ಸಕ್ರಪ್ಪ ಎಂಬುವವರ ಹೆಸರಿನಲ್ಲಿಯೇ ಜಮೀನು ಇದೆ ಎಂದು ಸ್ಪಷ್ಟಪಡಿಸಿದರು.

ಮೈನ್ಸ್ ಕಂಪನಿಗಳು ಕಾನೂನು ಬಾಹಿರವಾಗಿ ದಬ್ಬಾಳಿಕೆ ದೌರ್ಜನ್ಯದಿಂದ ದಲಿತರ ಜಮೀನನ್ನು ಕಬಳಿಸುವ ಉದ್ದೇಶದಿಂದ ಅದಿರಿಗೆ ಸಂಬಂಧಿಸಿದ ತ್ಯಾಜ್ಯ ವಸ್ತುಗಳನ್ನು ಜಮೀನಿನಲ್ಲಿ ಸುರಿದಿದ್ದಾರೆ. ಈ ವಿಚಾರವಾಗಿ ಸಂಬಂಸಿದ ತಹಸೀಲ್ದಾರ್, ಸರ್ವೆ ಇಲಾಖೆ ಸೇರಿದಂತೆ ನಾನಾ ಇಲಾಖೆ ಅಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು.

ಜಮೀನಿನ ಮಾಲೀಕರಿಗೆ ನ್ಯಾಯ ಕೊಡಿಸುವ ಕೆಲಸವಾಗಿಲ್ಲ. ಅಧಿಕಾರಿಗಳು ಸಹ ಗಣಿ ಕಂಪನಿಗಳ ಜತೆ ಶಾಮೀಲು ಆಗಿರುವ ಅನುಮಾನವಿದೆ. ಅಕ್ರಮವಾಗಿ ಹಾಕಿರುವ ತ್ಯಾಜ್ಯವನ್ನು ತೆರವುಗೊಳಿಸಿ, ಗಣಿ ಕಂಪನಿಗಳ ಮೇಲೆ ಹಾಗೂ ಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ನ್ಯಾಯ ದೊರಕಿಸದೇ ವಿಳಂಬವಾದರೇ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಹೋ ರಾತ್ರಿ ಧರಣಿ ಕೈಗೊಳ್ಳಲಾಗುವುದು ಎಂದು ಎಚ್ಚರಿಕ್ಕೆ ನೀಡಿದರು.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net