ಕೆರೆಗಳ ಶುದ್ಧೀಕರಣಕ್ಕೆ ಪಟ್ಟು

21Dbp3
ದೊಡ್ಡಬಳ್ಳಾಪುರದ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಮುಖಂಡರು ಅಮರಣಾಂತ ಉಪವಾಸ ಸತ್ಯಾಗ್ರಹ ಕುರಿತು ಮಾಹಿತಿ ನೀಡಿದರು. ಮುಖಂಡರಾದ ವಸಂತ್, ಸತೀಶ್, ರಮೇಶ್ ಇತರರು ಇದ್ದರು.
Published on

25ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಸಿದ್ಧತೆ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರಸಭೆ, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯ ಒಳಚರಂಡಿ ನೀರು, ಕೈಗಾರಿಕಾ ಪ್ರದೇಶದ ಕಾರ್ಖಾನೆಗಳ ರಾಸಾಯನಿಕ ತ್ಯಾಜ್ಯ ನೀರು ಸೇರಿ ಇತರ ತ್ಯಾಜ್ಯ ನೇರವಾಗಿ ಅರ್ಕಾವತಿ ನದಿ ಪಾತ್ರದ ಕೆರೆಗಳ ಒಡಲು ಸೇರಿ ಸಂಪೂರ್ಣ ಕಲುಷಿತಗೊಂಡಿವೆ. ಈ ಕೆರೆಗಳ ನೀರನ್ನು ಬಳಿಸಿದ ಜನರು ರೋಗಪೀಡಿತರಾಗುತ್ತಿದ್ದಾರೆ. ಪ್ರಾಣಿ ಪಕ್ಷಿಗಳು, ಜಲಚರಗಳು ಸಾವನ್ನಪ್ಪುತ್ತಿವೆ. ಆದ್ದರಿಂದ ಕೆರೆಗಳ ಸಂರಕ್ಷಣೆಗೆ, ಶುದ್ಧೀಕರಣಕ್ಕೆ ಈಗಾಗಲೇ ಹಲವು ಬಾರಿ ಮನವಿ, ಹೋರಾಟ, ಪ್ರತಿಭಟನೆ ಸೇರಿ ನಾನಾ ಪ್ರಯತ್ನ ಮಾಡಿದರೂ ಸಮಸ್ಯೆ ಬಗೆಹರಿಯಲಿಲ್ಲ. ಹೀಗಾಗಿ ಗ್ರಾಮಸ್ಥರು ಮತ್ತು ಅರ್ಕಾವತಿ ನದಿ ಪಾತ್ರದ ಕೆರೆ ಸಂರಕ್ಷಣಾ ವೇದಿಕೆ ಸಮಿತಿ ಮುಖಂಡರು ಪಟ್ಟು ಬಿಡದೇ ಕೆರೆ ಶುದ್ಧೀಕರಣ, ಸಂರಕ್ಷಣೆಗೆ ಹೋರಾಟಕ್ಕೆ ಸಜ್ಜಾಗಿದ್ದಾರೆ.

ಅರ್ಕಾವತಿ ಒಡಲು ಸೇರುತ್ತಿರುವ ಕೊಳಚೆ ನೀರಿಗೆ ಕಡಿವಾಣ ಹಾಕಲು ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಸದಸ್ಯರು ನಿರ್ಧರಿಸಿದ್ದು, ಕೊಳಚೆ ನೀರು ಹರಿದು ಬರುವ ಕಾಲುವೆಯನ್ನು ಮಣ್ಣು ತುಂಬಿ ಮುಚ್ಚುವುದಾಗಿ ಪೊಲೀಸ್ ಇಲಾಖೆಯಲ್ಲಿ ಮನವಿ ಮಾಡಿದ್ದರು. ಆದರೆ ಪೊಲೀಸ್ ಇಲಾಖೆಯಿಂದ ಅನುಮತಿ ದೊರೆಯದ ಕಾರಣ ಜು.25ರಿಂದ ತಾಲೂಕು ಕಚೇರಿ ಮುಂಭಾಗ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡಲು ಸಿದ್ಧತೆ ಕೈಗೊಂಡಿದ್ದಾರೆ.

ಕಚೇರಿ ಸ್ಥಳಾಂತರಕ್ಕೆ ಮೀನಮೇಷ: ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿಸರ ಮಾಲಿನ್ಯ ನಿಯಂತ್ರಣ ಮಂಡಿ ಕಚೇರಿಯನ್ನು ನಗರಕ್ಕೆ ಸ್ಥಳಾಂತರ ಮಾಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಉರುಳು ಸೇವೆ ಮಾಡಿದರೂ ಇದುವರೆಗೂ ಸ್ಥಳಾಂತರವಾಗಿಲ್ಲ. ಇಂತಹ ಕನಿಷ್ಠ ಸಮಸ್ಯೆಗಳನ್ನು ಇತ್ಯರ್ಥ ಪಡಿಸುವಲ್ಲೂ ಜನಪ್ರತಿನಿಧಿಗಳು, ಜಿಲ್ಲಾಡಳಿತ ವಿಫಲವಾಗಿದೆ. ಈ ಎಲ್ಲ ಕಾರಣದಿಂದ ಜು.25ರಂದು ತಾಲೂಕು ಕಚೇರಿ ಎದುರು ಅಮರಣಾಂತ ಉಪವಾಸ ಕೈಗೊಂಡಿದ್ದೇವೆ ಎಂದು ಮುಖಂಡ ಸತೀಶ್ ಹೇಳಿದರು.

ನಮ್ಮ ಹೋರಾಟ ನಿಲ್ಲದು

ಹತ್ತು ವರ್ಷಗಳಿಂದ ಕೆರೆಗಳ ಉಳಿವುಗಾಗಿ ಹೋರಾಟ ಮಾಡುತ್ತಿದ್ದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಶುದ್ಧ ಕುಡಿಯುವ ನೀರು ಕೊಟ್ಟಿಲ್ಲ. ಈವರೆಗೆ ಅಧಿಕಾರಕ್ಕೆ ಬಂದಿರುವ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳ ಭರವಸೆಯಲ್ಲೇ ಕಾಲಕಳೆದಿದ್ದಾರೆ ಎಂದು ಕೆರೆ ಸಂರಕ್ಷಣೆ ಹೋರಾಟ ಸಮಿತಿ ಮುಖಂಡ ವಸಂತ್ ಬೇಸರ ವ್ಯಕ್ತಪಡಿಸಿದರು. ನಮ್ಮ ಭಾಗದ ಎಲ್ಲ ಕೆರೆಗಳು ಸಂಪೂರ್ಣ ಕಲುಷಿತಗೊಂಡಿವೆ. ಕೊಳವೆ ಬಾವಿಗಳಲ್ಲಿ ಬರುತ್ತಿರುವ ಕುಡಿಯುವ ನೀರು ಯೋಗ್ಯವಾಗಿಲ್ಲ. ಮಜರಾಹೊಸಹಳ್ಳಿ, ದೊಡ್ಡತುಮಕೂರು ಗ್ರಾಪಂಗಳಿಗೆ ಅರ್ಕಾವತಿ ನದಿ ಪಾತ್ರದ ಕೆರೆಗಳಿಗೆ ಕೊಳಚೆ ನೀರನ್ನು ಶುದ್ಧೀಕರಿಸಿ ಬಿಡುವಂತೆ ಸಾಕಷ್ಟು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಹೀಗಾಗಿ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು. ಶೀಘ್ರವಾಗಿ ಇದಕ್ಕೆ ಕಾರಣವಾಗಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಕೆರೆಗಳ ಶುದ್ಧೀಕರಣ ಮಾಡಬೇಕು. ಇಲ್ಲವಾದಲ್ಲಿ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಚ್ಚರಿಸಿದರು. ಈ ಹಿಂದೆ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದ ವೇಳೆ ಜಿಲ್ಲಾಧಿಕಾರಿಗಳು ಗ್ರಾಮಗಳಲ್ಲಿ ಸಭೆ ನಡೆಸಿ ಸಂಧಾನ ಮಾಡಿದ್ದರು. ಅಂದು ನೀಡಿದ ಯಾವುದೇ ಭರವಸೆಯು ಇದುವರೆಗೂ ಈಡೇರಿಲ್ಲ. ನಮ್ಮ ಭಾಗದಲ್ಲಿ ತಿಂಗಳಿಗೆ ಎರಡು ಮೂರು ಸಾವುಗಳು ಆಗುತ್ತಿವೆ. ಈ ಸಾವು ಸಹಜವಾಗಿಲ್ಲ. ಬದಲಿಗೆ ಕಿಡ್ನಿ ಸಮಸ್ಯೆ, ಕ್ಯಾನ್ಸರ್, ಶ್ವಾಸಕೋಶ ಸಮಸ್ಯೆ ಸೇರಿ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗಿ ಅಕಾಲಿಕ ಮರಣ ಹೊಂದುತ್ತಿದ್ದಾರೆ. ಇದಕ್ಕೆ ಕಾರಣ ಅಶುದ್ಧ ಕುಡಿಯುವ ನೀರು, ಕೆರೆಗಳ ಮಾಲಿನ್ಯದಿಂದ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net