ಸರ್ಕಾರಕ್ಕೆ ಸಿಮೆಂಟ್ ಮಂಜು ಆಗ್ರಹ

IMG-20240214-WA0244
Published on
  • ಹಾಸನ: ಆಲೂರು ಕ್ಷೇತ್ರದ ಕೆಲಭಾಗದಲ್ಲಿ ಮೂರು ಜಲಾಶಯಗಳ ನೀರು ಹಾದು ಹೋದರೂ ರೈತರ ಕೃಷಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

  • ವಿಧಾನಸಭೆ ಮಂಗಳವಾರ ಅಧಿವೇಶನದ ಶೂನ್ಯ ವೇಳೆಯಲ್ಲಿ ಸರ್ಕಾರದ ಗಮನ ಸೆಳೆದ ಅವರು, ಕ್ಷೇತ್ರದಲ್ಲಿ ಹೇಮಾವತಿ, ವಾಟೆಹೊಳೆ ಹಾಗೂ ಯಗಚಿ ಜಲಾಶಯದ ನೀರು ನಾಲೆಗಳ ಮೂಲಕ ಹರಿಯುತ್ತದೆ. ಹೇಮಾವತಿ ಉಪನದಿ ಯಗಚಿ ನಾಲೆ ಹುಣಸವಳ್ಳಿ ಮತ್ತು ದೊಡ್ಡ ಕಣಗಾಲ್ ಗ್ರಾಮ ಪಂಚಾಯಿತಿ ಕೆಲ ಗ್ರಾಮಗಳ ಮೂಲಕ ಕಟ್ಟಾಯ ಹೋಬಳಿಯಲ್ಲಿ ಹಾದು ಹೋಗಿದೆ. ಆದರೆ, ನಾಲೆಗಳಲ್ಲಿ ಅಲ್ಲಲ್ಲಿ ಹೂಳು ತುಂಬಿಕೊಂಡಿರುವುದರಿಂದ ನೀರು ಮುಂದಕ್ಕೆ ಸಾಗದೆ ಪೋಲಾಗುತ್ತಿದೆ. ಈ ನಾಲೆಗೆ ಯಾವುದೇ ಒಂದೇ ಒಂದು ಉಪ ನಾಲೆಗಳು ಇಲ್ಲ. ಇದರಿಂದ ರೈತರಿಗೆ ಉಪಯೋಗ ಇಲ್ಲದಂತಾಗಿದೆ. ಆದ್ದರಿಂದ ಸರ್ಕಾರ ಗ್ಯಾರಂಟಿಗಳಿಗೆ ಹಣ ನೀಡುವುದರ ಬದಲು ನಾಲೆಗಳನ್ನು ದುರಸ್ತಿ ಪಡಿಸಿದರೆ ರೈತರು ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಲಿದ್ದಾರೆ ಎಂದು ಹೇಳಿದರು.

  • ದುರಸ್ತಿ ಕಾಣದ ವಾಟೆಹೊಳೆ ನಾಲೆ:
    ಮೂರು ದಶಕಗಳ ಹಿಂದೆ ನಿರ್ಮಾಣವಾಗಿರುವ ವಾಟೆಹೊಳೆ ಜಲಾಶಯ ಸೀಳು ಕಾಲುವೆ ಸೇರಿದಂತೆ ಮೂರು ಕಾಲುವೆಗಳನ್ನು ಹೊಂದಿದ್ದು, ತಾಲೂಕಿನ 35 ಸಾವಿರ ಹೆಕ್ಟೇರ್ ಪ್ರದೇಶದ ರೈತರಿಗೆ ನೀರು ಕೊಡಬಹುದಿತ್ತು. ಆದರೆ 35 ವರ್ಷಗಳಿಂದ ಇದುವರೆವಿಗೂ ನಾಲೆಗಳು ದುರಸ್ತಿ ಕಾಣದಿರುವುದರಿಂದ ಕೇವಲ 5 ಕಿ.ಮೀ. ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ನಾಲೆಗಳಲ್ಲಿ ಹೂಳು ತುಂಬಿಕೊಂಡು ಅಲ್ಲಲ್ಲಿ ಕಾಲುವೆ ಒಡೆದು ಹೋಗಿದ್ದು, ಶೇ.50ಕ್ಕಿಂತ ಹೆಚ್ಚು ನೀರು ಪೋಲಾಗುತ್ತಿದೆ. ಆದ್ದರಿಂದ ಸರ್ಕಾರ ನಾಲೆ ದುರಸ್ತಿಗೆ 200 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ನಾಲೆಗಳನ್ನು ದುರಸ್ತಿ ಮಾಡಿಸಬೇಕು ಎಂದು ಒತ್ತಾಯಿಸಿದರು.

  • ಸಂತ್ರಸ್ತರಿಗೆ ಪರಿಹಾರ ನೀಡಿಲ್ಲ:
    ಆಲೂರು-ಸಕಲೇಶಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ದೊಡ್ಡ ಕಾಲುವೆ ನಿರ್ಮಾಣ ಮಾಡಿಕೊಂಡು ಹೊರ ಜಿಲ್ಲೆಗೆ ನೀರು ಹರಿಸಲು ಮುಂದಾಗಿರುವುದು ಸಂತೋಷ. ಆದರೆ ಭೂಸ್ವಾಧೀನ ಮಾಡಿಕೊಂಡಿರುವ ರೈತರಿಗೆ ಸರಿಯಾಗಿ ಪರಿಹಾರ ನೀಡಿಲ್ಲ. ರೈತರು ಕಚೇರಿಯಿಂದ ಕಚೇರಿಗೆ ಅಲೆಯುತ್ತಿದ್ದಾರೆ. ಅವರಿಗೆ ತಕ್ಷಣ ಪರಿಹಾರ ನೀಡಬೇಕು. ಜತೆಗೆ ಆಲೂರು ತಾಲೂಕಿನಲ್ಲಿ ಕಾಮಗಾರಿಗೆ ಬಳಸುವ ಭಾರಿ ಗಾತ್ರದ ವಾಹನಗಳು ಓಡಾಡುತ್ತಿರುವುದರಿಂದ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು ಹೊಂಡ ಬಿದ್ದಿದೆ. ಆದ್ದರಿಂದ ರಸ್ತೆ ನಿರ್ಮಾಣಕ್ಕೆ 200 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

  • ಶಾಸಕ ಸಿಮೆಂಟ್ ಮಂಜು ಪ್ರಶ್ನೆಗೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿ, ಸಕಲೇಶಪುರ ಕ್ಷೇತ್ರಕ್ಕೆ ಮಂಜು ಶಾಸಕರಾಗುವ ಮೊದಲು ಸಾಕಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ. ಹೆಚ್ಚಿನ ಅನುದಾನಕ್ಕೆ ಬೇಡಿಕೆ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು. ಈಗ ಎತ್ತಿನಹೊಳೆ ಕಾಲುವೆಯಿಂದ ಮೊದಲು ನೀರು ಹರಿಸಲಾಗುವುದು. ಈಗಾಗಲೇ ಐದೂವರೆ ಕಿ.ಮೀ.ನಾಲೆ ದುರಸ್ತಿ ಮಾಡಲಾಗಿದೆ. ಇನ್ನೂ ಎರಡ್ಮೂರು ಕಿ.ಮೀ. ದುರಸ್ತಿಪಡಿಸಲು ರೈತರು ಜಮೀನು ಬಿಟ್ಟು ಕೊಡುತ್ತಿಲ್ಲ. ರೈತರಿಂದ ಭೂಸ್ವಾಧೀನಪಡಿಸಿಕೊಂಡು ಆದಷ್ಟು ಬೇಗ ಸಮಸ್ಯೆ ಬಗೆಹರಿಸಿ ರೈತರಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net