

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಶಬರಿಮಲೆಯಲ್ಲಿ 20 ವರ್ಷಗಳಿಂದ ನಡೆಯುತ್ತಿರುವ ಲೂಟಿ, ಚಿನ್ನ ಕಳ್ಳತನದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು. ಮುಜರಾಯಿ ಸಚಿವರು ರಾಜೀನಾಮೆ ಸಲ್ಲಿಸಬೇಕು. ದೇವಸ್ವಂ ಮಂಡಳಿ ವಿಸರ್ಜನೆ ಸೇರಿ ಹಲವು ಬೇಡಿಕೆ ಮುಂದಿರಿಸಿ ಬಿಜೆಪಿ ಜಿಲ್ಲಾ ಸಮಿತಿ ಗುರುವಾರ ನಡೆಸಿದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆಯಲ್ಲಿ ಕಾರ್ಯಕರ್ತರ ಆವೇಶ ಮುಗಿಲು ಮುಟ್ಟಿತ್ತು.
ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ೋಷಣೆೆ ಕೂಗಿ ಜಿಲ್ಲಾಧಿಕಾರಿ ಕಚೇರಿ ಮುಖ್ಯ ಗೇಟಿಗೆ ಹಾಕಿದ್ದ ಬ್ಯಾರಿಕೇಡ್ ಏರಿ ಕಚೇರಿ ಆವರಣಕ್ಕೆ ನುಗ್ಗಲು ಯತ್ನಿಸುತ್ತಿದ್ದಂತೆ ಪೊಲೀಸರು ಜಲಫಿರಂಗಿ ಹಾಯಿಸಿ ಕಾರ್ಯಕರ್ತರನ್ನು ಚದುರಿಸಲು ಯತ್ನಿಸಿದರು. ಮಹಿಳೆಯರು, ನೂರಾರು ಮಂದಿ ಕಾರ್ಯಕರ್ತರು ಜಲಫಿರಂಗಿಗೆ ಜಗ್ಗದೆ ಮುನ್ನುಗ್ಗಿದರು.
ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎ.ಪಿ.ಅಬ್ದುಲ್ಲಕುಟ್ಟಿ ಧರಣಿ ಉದ್ಘಾಟಿಸಿ ಮಾತನಾಡಿ, ಟಿಪ್ಪು ಸುಲ್ತಾನ್, ಮೊಘಲರು ದೇವಾಲಯ ಲೂಟಿ ಮಾಡಿದ ಇತಿಹಾಸವನ್ನು ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರ್ಕಾರ ಮುಂದುವರಿಸುವ ಮೂಲಕ ಹಿಂದು ಸಮಾಜಕ್ಕೆ ಕಳಂಕ ತಂದೊಡ್ಡುತ್ತಿದೆ. ಭಾರತದಲ್ಲಿ ಹಿಂದುಗಳನ್ನು ಹೊರತುಪಡಿಸಿ ಉಳಿದೆಲ್ಲ ಸಮುದಾಯದ ದೇವಾಲಯ, ಅವರ ಆಸ್ತಿಗಳನ್ನು ಆಯಾ ಧರ್ಮದ ಅನುಯಾಯಿಗಳೇ ನಿರ್ವಹಿಸುತ್ತಿದ್ದರೂ, ಕಮ್ಯೂನಿಸ್ಟರು, ನಾಸ್ತಿಕ ರಾಜಕಾರಣಿಗಳಿಂದ ಹಿಂದು ದೇವಾಲಯಗಳನ್ನು ನಿರ್ವಹಿಸುವ ಸಂಪ್ರದಾಯಕ್ಕೆ ಇತಿಶ್ರೀ ಹಾಡಬೇಕಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕೋಶ ಸಂಯೋಜಕ, ವಕೀಲ ವಿ.ಕೆ.ಸಜೀವನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್.ಸುನೀಲ್, ಎನ್.ಬಾಬುರಾಜ್, ಮನುಲಾಲ್ ಮೇಲತ್ ಪಾಲ್ಗೊಂಡಿದ್ದರು.
ಪ್ರತಿಭಟನಾ ಮೆರವಣಿಗೆ
ವಿದ್ಯಾನಗರದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಬಿಜೆಪಿ ಉಪಾಧ್ಯಕ್ಷರಾದ ಪಿ.ರಮೇಶ್, ಎಚ್.ಆರ್.ಸುಕನ್ಯಾ, ಮುರಳೀಧರ ಯಾದವ್, ಎಂ.ಭಾಸ್ಕರನ್, ಎಂ.ಬಾಲರಾಜ್, ಕಾರ್ಯದರ್ಶಿಗಳಾದ ಎನ್.ಮಧು, ಲೋಕೇಶ್ ನೋಂಡ, ಸಂಜೀವ ಪುಳಿಕೂರು, ಕೆ.ಎಂ.ಅಶ್ವಿನಿ, ಕೆ.ಟಿ.ಪುರುಷೋತ್ತಮನ್, ಪುಷ್ಪಾ ಗೋಪಾಲನ್, ಪದಾಧಿಕಾರಿಗಳಾದ ಸುಕುಮಾರ್ ಕುದುರೆಪ್ಪಾಡಿ, ವೀಣಾ ಅರುಣ ಶೆಟ್ಟಿ, ವಿಜಯಕುಮಾರ್ ರೈ, ಎ.ವೇಲಾಯುಧನ್, ಸವಿತಾ, ಸತೀಶ್ ಚಂದ್ರ ಭಂಡಾರಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಕೆ.ಎಸ್.ರಮಣಿ, ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷ ಸುಹೈಲ್ ಕೂಲಿಯಂಕಲ್, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ.ವಲ್ಸರಾಜ್ ಮೊದಲಾದವರು ನೇತೃತ್ವ ವಹಿಸಿದ್ದರು.
370ನೇ ವಿಧಿ ತೆಗೆದು ಹಾಕಿದಂತೆ ದೇವಾಲಯಗಳ ನಿರ್ವಹಣೆ ವಿಚಾರದಲ್ಲಿ ಬಲವಾದ ಕ್ರಮ ತೆಗೆದುಕೊಳ್ಳಬೇಕು. ಪಿಣರಾಯಿ ವಿಜಯನ್ ಶಬರಿಮಲೆಯಲ್ಲಿ ಆಚರಣೆ ಉಲ್ಲಂಸಿದ್ದು, ಇದರಿಂದ ಮೋಕ್ಷ ಪಡೆಯಲು ಜಾಗತಿಕ ಅಯ್ಯಪ್ಪ ಸಂಗಮ ನಡೆಸಿದ್ದಾರೆ. ಅಯ್ಯಪ್ಪ ದೇಗುಲದಲ್ಲಿ ಚಿನ್ನ ಕಳವು ಪ್ರಕರಣದಿಂದ ಮುಖ್ಯಮಂತ್ರಿಗೆ ನುಣುಚಿಕೊಳ್ಳಲು ಸಾಧ್ಯವಿಲ್ಲ. ಎ.ಪಿ.ಅಬ್ದುಲ್ಲಕುಟ್ಟಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ