ಕ್ಯಾರಿ ಫಾರ್ವರ್ಡ್ ಪದ್ಧತಿ ಮರು ಅನುಷ್ಠಾನಗೊಳಿಸಿ: ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ ಒತ್ತಾಯ

Demand for carry forward system Mandya
Published on

ಮಂಡ್ಯ: ಇಂಜಿನಿಯರಿಂಗ್ ಮತ್ತು ತಾಂತ್ರಿಕ ಶಿಕ್ಷಣದಲ್ಲಿ ಪ್ರಸ್ತುತ ಇರುವ ಕ್ಯಾರಿ ಓವರ್ ಪದ್ಧತಿಯನ್ನು ರದ್ದುಗೊಳಿಸಿ 2022ರ ಹಿಂದಿನ ಕ್ಯಾರಿ ಫಾರ್ವರ್ಡ್ ಪದ್ದತಿಯನ್ನು ಮರು ಅನುಷ್ಠಾನಗೊಳಿಸುವಂತೆ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಒತ್ತಾಯಿಸಿದರು.

ಹಳೇ ಪದ್ಧತಿ ಮುಂದುವರೆಸುವ ನಿಟ್ಟಿನಲ್ಲಿ ಸರ್ಕಾರದ ಗಮನಸೆಳೆಯಲು ಹೋರಾಟ ರೂಪಿಸಲು ನಗರದ ಪ್ರವಾಸಿ ಮಂದಿರದಲ್ಲಿ ವಿವಿಧ ಸಂಘಟನೆಗಳು ಹಾಗೂ ವಿವಿಧ ಪಕ್ಷದ ಮುಖಂಡರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಈ ವಿಷಯಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ಉನ್ನತ ಶಿಕ್ಷಣ ಸಚಿವರನ್ನು ನಿಯೋಗದೊಡನೆ ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ತಾಂತ್ರಿಕ ಶಿಕ್ಷಣದಲ್ಲಿ ಈಗಿರುವ ಕ್ಯಾರಿ ಓವರ್ ಪದ್ಧತಿಯನ್ನು ಕನ್ನಡ ಮಾಧ್ಯಮ, ಗ್ರಾಮೀಣ ಪ್ರದೇಶ, ರೈತರು ಮತ್ತು ಶೋಷಿತ ಸಮುದಾಯದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಮೊದಲನೇ ಮತ್ತು ಎರಡನೇ ವರ್ಷ ಕಲಿಕೆ ಕಷ್ಟವಾಗುತ್ತಿರುವುದರಿಂದ ಓದಿನಿಂದಲೇ ವಿಮುಖವಾಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಅಪ್ಪಾಜಿಗೌಡ ಮಾತನಾಡಿ, ಹೊಸ ಪರೀಕ್ಷಾ ನೀತಿ, ಸರ್ಕಾರಿ ಮತ್ತು ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ನಡುವೆ ಕ್ಯಾರಿ ಓವರ್ ಮತ್ತು ಕ್ಯಾರಿ ಫಾರ್ವರ್ಡ್ ನಡುವಿನ ದ್ವಂದ್ವ ಹಾಗೂ ಮನಸೋ ಇಚ್ಚೆ ಶುಲ್ಕ ಪಡೆಯುವ ವ್ಯವಸ್ಥೆ ಇರುವುದರಿಂದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸಾಕಷ್ಟು ಅನಾನುಕೂಲವಾಗುತ್ತಿದೆ. ಈ ಎಲ್ಲ ವಿಷಯಗಳನ್ನ ಸಚಿವರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದರು.

ಇಂಜಿನಿಯರಿಂಗ್ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪಕ್ಷಾತೀತವಾಗಿ ಈ ಹೋರಾಟವನ್ನು ಕೊಂಡೊಯ್ಯುವುದು ವಿದ್ಯಾರ್ಥಿಗಳು, ಶಿಕ್ಷಣ ತಜ್ಞರೊಡನೆ ಸಂವಾದ ನಡೆಸಿ ವ್ಯಾಸಂಗದಲ್ಲಿ ಆಗುತ್ತಿರುವ ಸಾಧಕ ಬಾಧಕಗಳನ್ನ ಸರ್ಕಾರದ ಗಮನಕ್ಕೆ ತರಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.

ಮೈಷುಗರ್ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಸಾತನೂರು ವೇಣುಗೋಪಾಲ್ ವಿಷಯ ಮಂಡಿಸಿದರು. ಶಿಕ್ಷಣ ತಜ್ಞ ಪ್ರೊ.ಬಿ.ಶಿವಲಿಂಗಯ್ಯ, ವೈದ್ಯರ ಸಂಘದ ಮಾಜಿ ಅಧ್ಯಕ್ಷ ಡಾ.ಎಚ್.ಆರ್.ರವೀಂದ್ರ, ಗುರುಮೂರ್ತಿ ಹಾರೋಹಳ್ಳಿ, ರೈತ ಸಂಘದ ಮುಖಂಡರಾದ ಮಂಜೇಶ್‌ಗೌಡ ದೊಡ್ಡಪಾಳ್ಳ, ಇಂಡುವಾಳು ಚಂದ್ರಶೇಖರ್, ಡಿ.ದೇವರಾಜು ಅರಸು ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಮುಖಂಡರಾದ ಎಂ.ಬಿ.ನಾಗಣ್ಣಗೌಡ, ಸಿ.ಕುಮಾರಿ, ನಾರಾಯಣ್, ಮಂಜುನಾಥ್, ಜೆ.ರಾಮಯ್ಯ, ಪದ್ಮಾ ಮೋಹನ್, ಎಸ್.ಬಿ.ನಾರಾಯಣಸ್ವಾಮಿ, ಶ್ರೀಧರ್, ಸಿ.ಎಂ.ದ್ಯಾವಪ್ಪ, ರಾಜೂಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net