

ತಿ.ನರಸೀಪುರ: ತಿ. ನರಸೀಪುರ ಮತ್ತು ಮಳವಳ್ಳಿ ಎರಡು ತಾಲೂಕುಗಳ ಗ್ರಾಮಗಳ ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಆರಂಭಿಸಬೇಕು ಎಂದು ತಾಲೂಕಿನ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಮಂಡ್ಯ ವಿಭಾಗದ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿಯನ್ನು ಒತ್ತಾಯಿಸಿದರು.
ಮಂಡ್ಯ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಯಲ್ಲಿ ಗುರುವಾರ ನಿಯಂತ್ರಣಾಧಿಕಾರಿ ಎಸ್.ಪಿ.ನಾಗರಾಜ ಅವರನ್ನು ಭೇಟಿಯಾಗಿ ಬಸ್‌ಗಳ ಸಂಚಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ತಾಲೂಕಿನ ಕಬ್ಬು ಬೆಳೆಗಾರರ ಸಂಘದ ಮುಖಂಡರು ಹಾಗೂ ಪದಾಧಿಕಾರಿಗಳು ಬಸ್ ಸೌಕರ್ಯ ಇಲ್ಲದರಿಂದ ರೋಗಿಗಳಿಗೆ ಹಾಗೂ ಗರ್ಭಿಣಿಯರು ಆಸ್ಪತ್ರೆಗಳಿಗೆ ಹೋಗಿ ಬರಲು ಹರಸಾಹಸಪಡುತ್ತಿದ್ದಾರೆ. ಹಾಗಾಗಿ ಎರಡು ತಾಲೂಕಿನ ಹಳ್ಳಿಗಾಡಿನ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ವಯೋವೃದ್ಧರು ಹಾಗೂ ಕೂಲಿ ಕಾರ್ಮಿಕರ ಅನುಕೂಲಕ್ಕಾಗಿ ತಾಲೂಕು ಕೇಂದ್ರಗಳನ್ನು ಸಂಪರ್ಕಿಸುವಂತೆ ನಿತ್ಯವೂ ಬಸ್ಸುಗಳ ಸಂಚಾರ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಮಹಿಳಾ ಅಧ್ಯಕ್ಷೆ ರೂಪಾ ಮಲ್ಲೇಶ್ ಮಾತನಾಡಿ, ಮಳವಳ್ಳಿಯಿಂದ ತಿ.ನರಸೀಪುರಕ್ಕೆ ಹೋಗಿ ಬರುವ ಮಾರ್ಗದಲ್ಲಿರುವ ಸೋಸಲೆ ಹೋಬಳಿ ಮುಡುಕನಪುರ, ಹುಚ್ಚನದೊಡ್ಡಿ ಗೇಟ್, ರಾಗಿ ಬೊಮ್ಮನಹಳ್ಳಿ, ಹಂಗರಾಪುರ, ವಡಕೆಪುರ ಶನೇಶ್ವರ ದೇವಸ್ಥಾನ, ನಲ್ಲಿಗೆರೆ, ರಾಮೇಗೌಡನಪುರ ಹಣಕೊಳ ಗೇಟ್, ಕೆಂಪನಪುರ, ಎಸ್.ದೊಡ್ಡಪುರ, ಚಿದರವಳ್ಳಿ ಮುಡುಕನಪುರ, ಹಲವಾರ ದೊಡ್ಡಬಾಗಿಲು ಗೇಟ್, ದೊಡ್ಡಬಾಗಿಲು, ಕೃಷ್ಣಾಪುರ, ಕಾರ್ಗಳ್ಳಿ, ಕೈಯಂಬಳ್ಳಿ, ಕೆಬ್ಬೇಹುಂಡಿ, ಮೆಗಡಹಳ್ಳಿ, ಮುಸುವಿನಕೊಪ್ಪಲು, ಬೆನಕನಹಳ್ಳಿ, ತಿ ನರಸೀಪುರಕ್ಕೆ ಸರ್ಕಾರಿ ಸಾರಿಗೆ ಬಸ್ ಸಂಚಾರ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಮಾತನಾಡಿ, ರೈತರು, ಕೂಲಿ ಕಾರ್ಮಿಕರು ತಮ್ಮ ತಮ್ಮ ಕೆಲಸ ಕಾರ್ಯಗಳಿಗೆ ಪ್ರತಿದಿನ ಸರ್ಕಾರಿ ಕಚೇರಿಗಳು ಹಾಗೂ ನ್ಯಾಯಾಲಯಗಳಿಗೆ ಸಮಯಕ್ಕೆ ಸರಿಯಾಗಿ ಹೋಗಿ ಬರಲು ಬಸ್‌ಗಳ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ಆದ್ದರಿಂದ ತಾವು ತುರ್ತಾಗಿ ಕ್ರಮ ಕೈಗೊಂಡು ಹೆಚ್ಚು ಬಸ್ಸುಗಳ ವ್ಯವಸ್ಥೆ ಮಾಡಿಸಿ ಸಮಯಕ್ಕೆ ಸರಿಯಾಗಿ ಹೋಗಿ ಬರಲು ಅನುಕೂಲ ಮಾಡಿ ಕೊಡಬೇಕು ಎಂದು ತಿಳಿಸಿದರು.
ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕಿರಗನೂರು ಶಂಕರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಿ.ಪಿ.ಪರಶಿವಮೂರ್ತಿ, ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್, ತಾಲೂಕು ಉಪಾಧ್ಯಕ್ಷ ಹೆಗ್ಗೂರು ರಂಗರಾಜು ಹಾಗೂ ಕುರುಬೂರು ಶಿವಪ್ರಸಾದ್ ಇದ್ದರು.