

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಕುತ್ಲೂರು ಗ್ರಾಮದ ಅಲಂಬಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮುರಿದು ಬಿದ್ದು ಎರಡು ವಷರ್ಗಳಾದರೂ ಸೇತುವೆ ದುರಸ್ತಿ, ಹೊಸ ಸೇತುವೆ ನಿರ್ಮಾಣ ಮಾಡದಿರುವ ಸರ್ಕಾರದ ಅಧಿಕಾರಿಗಳ ನೀತಿ ಖಂಡಿಸಿ, ಕುತ್ಲೂರಿನ ಮುರಿದ ಸೇತುವೆ ಮೇಲೆ ಈ ಸೇತುವೆಯನ್ನು ಅವಲಂಬಿಸಿರುವ ಆದಿವಾಸಿಗಳು, ಸ್ಥಳೀಯರು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಹಿರಿಯ ಸಿಪಿಐಎಂ ಮುಖಂಡ ಮುನೀರ್ ಕಾಟಿಪಳ್ಳ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ, ಆದಿವಾಸಿಗಳು ಸೇರಿದಂತೆ ನೂರಾರು ಜನರು ಪ್ರತಿನಿತ್ಯ ಉಪಯೋಗಿಸುವ ಸೇತುವೆ ಮುರಿದು ಬಿದ್ದು ಎರಡು ವಷರ್ ಕಳೆದರೂ ಇನ್ನೂ ಸರ್ಕಾರ ಎಚ್ಚೆತ್ತುಕೊಳ್ಳದಿರುವುದು ದುರಂತವಾಗಿದೆ. ಅರಣ್ಯದಲ್ಲಿ ವಾಸಿಸುವ ಆದಿವಾಸಿ ಕುಟುಂಬಗಳ ಬಗ್ಗೆ ಸರ್ಕಾರ ಯಾವ ನೀತಿಯನ್ನು ಅನುಸರಿಸುತ್ತಿದೆ ಎಂಬುದನ್ನು ಇದರಿಂದ ತಿಳಿಯಲು ಸಾಧ್ಯ ಎಂದರು.
ಸಿಪಿಐಎಂ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್ ಮಾತನಾಡಿ, ಕುತ್ಲೂರಿನ ಅಲಂಬ ಪರಿಸರದ ಜನತೆ ಕಳೆದ ಎರಡು ವರ್ಷಗಳಿಂದ ಸೇತುವೆ ಕುಸಿದ ಕಾರಣ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಸರ್ಕಾರದ ಯಾವ ಅಧಿಕಾರಿ, ಜನಪ್ರತಿನಿಧಿಗಳು ಈ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ಹೋರಾಟದ ಹಾದಿ ಹಿಡಿಯಬೇಕಾದ ಅನಿವಾರ್ಯತೆ ಬಂದಿದೆ ಎಂದರು.
ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಇಂಜಿನಿಯರ್ ಹರ್ಷಿತ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ಈಗಾಗಲೇ ಸೇತುವೆಗೆ 1.90 ಕೋಟಿ ಅಂದಾಜು ಪಟ್ಟಿಯನ್ನು ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾಗಿಲ್ಲ. ಮಳೆ ಹಾನಿಯಲ್ಲಿಯೂ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಹೋರಾಟಗಾರರಿಂದ ಮನವಿ ಸ್ವೀಕರಿಸಿದ ಅಧಿಕಾರಿಗಳು ತಮ್ಮ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು. ಲೋಕೋಪಯೋಗಿ ಇಲಾಖಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಹೋರಾಟಗಾರರೊಂದಿಗೆ ಮಾತುಕತೆ ನಡೆಸಿದರು. ಸ್ಥಳೀಯ ಗ್ರಾಪಂ ಸದಸ್ಯೆ ಯಶೋದಾ, ಇತರರು ಆಗಮಿಸಿ ಸಮಸ್ಯೆಯ ತೀವ್ರತೆ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು.
ಪ್ರತಿಭಟನೆಯ ನೇತೃತ್ವವನ್ನು ದಲಿತ ಹಕ್ಕುಗಳ ಹೋರಾಟ ಸಮಿತಿ ಮುಖಂಡರಾದ ಸುಕುಮಾರ ದಿಡುಪೆ ವಹಿಸಿದ್ದರು. ಪೂವಪ್ಪ ಮಲೆಕುಡಿಯ ಕುತ್ಲೂರು, ಈಶ್ವರಿ, ಸುಧಾಕರ ಮಲೆಕುಡಿಯ, ಶಶಿಧರ, ಚೀಂಕ್ರ, ಸುಜಾತ, ಜಯಶ್ರೀ, ಜಯರಾಮ ಮಯ್ಯ, ಇತರರು ಇದ್ದರು.
ಸಮಸ್ಯೆ ಪರಿಹಾರಕ್ಕೆ ಮನವಿ
ಕೇವಲ ಪ್ರಸ್ತಾವನೆ ಸಲ್ಲಿಸಿರುವುದರಿಂದ ಯಾವುದೇ ಪ್ರಯೋಜನವಿಲ್ಲ. ಅನುದಾನ ತರಿಸುವ ನಿಟ್ಟಿನಲ್ಲಿ ಶಾಸಕರು, ಜನಪ್ರತಿನಿಧಿಗಳು ಪ್ರಯತ್ನಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಹೋರಾಟಗಾರರು ತಮ್ಮ ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಮನವಿ ಸಲ್ಲಿಸಿದರು.