

ವಿಜಯವಾಣಿ ಸುದ್ದಿಜಾಲ ಕುಂದಾಪುರ
ಕರಾವಳಿ ಜಿಲ್ಲೆಗಳು ಬಹುತೇಕ ಮೀನುಗಾರಿಕೆಯನ್ನು ನೆಚ್ಚಿಕೊಂಡಿದ್ದು ಆರ್ಥಿಕತೆಗೆ ತನ್ನದೆ ಕೊಡುಗೆ ನೀಡುತ್ತಿದೆ. ಸಾಂಪ್ರದಾಯಿಕ ಮೀನುಗಾರಿಕೆ ನಡೆಸಿ ಅದೆಷ್ಟೋ ಬಡ ಕುಟುಂಬಗಳು ಹೊತ್ತಿನ ಊಟ ಮಾಡುತ್ತಿದೆ. ಇತ್ತೀಚೆಗೆ ಮತ್ಸ್ಯಕ್ಷಾಮ ಮೊದಲಾದ ಸಮಸ್ಯೆಗಳ ನಡುವೆಯೇ ಬುಲ್‌ಟ್ರಾಲ್ ಹಾಗೂ ಬೆಳಕು ಮೀನುಗಾರಿಕೆ (ಲೈಟ್ ಫಿಶಿಂಗ್) ಸಾಂಪ್ರದಾಯಿಕ ನಾಡದೋಣಿ ಮೀನುಗಾರರಿಗೆ ತಲೆನೋವಾಗಿ ಪರಿಣಮಿಸಿದೆ.
ಮತ್ಸ್ಯ ಸಂಪತ್ತಿಗೆ ಮಾರಕವಾದ ಬುಲ್‌ಟ್ರಾಲ್, ಲೈಟ್ ಫಿಶಿಂಗ್ ಅವೈಜ್ಞಾನಿಕ ಮೀನುಗಾರಿಕೆ ನಿಷೇಧಕ್ಕೆ ಹಲವು ಮನವಿಗಳು ಸಲ್ಲಿಸಿದರೂ ಎಚ್ಚೆತ್ತುಕೊಳ್ಳದ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜಾಣ ಕುರುಡುತನಕ್ಕೆ ಬೇಸತ್ತ ಮೀನುಗಾರರು ರಸ್ತೆಗಳಿದಿದ್ದು, ತ್ರಾಸಿಯಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
ಕೆಲವು ತಿಂಗಳ ಹಿಂದೆ ಉಡುಪಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪೊಲೀಸ್ ಹಾಗೂ ಸಂಬಂಧಪಟ್ಟ ಇಲಾಖಾಧಿಕಾರಿಗಳ ಸಭೆಯಲ್ಲಿ ಮಹತ್ವದ ನಿರ್ಣಯ ಮಾಡಲಾಗಿತ್ತು. ಅದರಂತೆ ಬೆಳಕು ಮೀನುಗಾರಿಕೆ, ಬುಲ್ ಟ್ರಾಲಿಂಗ್ ಮೀನುಗಾರಿಕೆ, ಸಣ್ಣ ಮೀನು ಮರಿಗಳನ್ನು ಹಿಡಿಯುವುದು ನಿಷೇಧಿಸುವುದು ಹಾಗೂ ದಂಡ ವಿಧಿಸುವ ಸಲುವಾಗಿ ಸಂಬಂಧಿತ ಇಲಾಖಾಧಿಕಾರಿ, ಸಿಬ್ಬಂದಿ ಕಾರ್ಯಾಚರಣೆ ತಂಡವನ್ನೂ ರಚಿಸಲಾಗಿತ್ತಾದರೂ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂಬ ಆರೋಪ ನಾಡದೋಣಿ ಮೀನುಗಾರರದು.
ರಾಜ್ಯದಲ್ಲಿ ನಿಷೇಧಿತ ಆದೇಶ ಇರುವ ಲೈಟ್ ಫಿಶಿಂಗ್ ಪರವಾಗಿ ಮೀನುಗಾರಿಕಾ ಸಚಿವರಿದ್ದಾರೆಂದು ನಾಡದೋಣಿ ಮೀನುಗಾರರು ಆರೋಪಿಸಿದ್ದಾರೆ. ಈ ಹಿಂದೆ ಮೀನುಗಾರಿಕಾ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಒತ್ತಾಯ ಮಾಡಿದ್ದರಿಂದ ಲೈಟ್ ಫಿಶಿಂಗ್, ಬುಲ್‌ಟ್ರಾಲ್ ಮೀನುಗಾರಿಕೆ ನಿಲ್ಲಿಸಬೇಕೆಂದು ಆದೇಶ ನೀಡಿದ್ದರು. ಅದರಂತೆ ಬುಲ್‌ಟ್ರಾಲ್ ಮೀನುಗಾರಿಕೆಯನ್ನು ಅಧಿಕಾರಿಗಳು ನಿಯಂತ್ರಣಕ್ಕೆ ತಂದಿದ್ದರು. ಸಚಿವರು ಬಂಡವಾಳ ಶಾಹಿ ಪರ್ಸಿನ್ ಬೋಟ್ ಮಾಲೀಕರ ಪರ ಇದ್ದಾರೆ. ಹೀಗಾಗಿ ಲೈಟ್‌ಫಿಶಿಂಗ್ ನಿರಂತರವಾಗಿದೆ ಎಂಬ ಆರೋಪ ನಾಡದೋಣಿ ಮೀನುಗಾರ ವಲಯದಿಂದ ಕೇಳಿಬರುತ್ತಿದೆ.
ಉಡುಪಿ, ದ.ಕ ಹಾಗೂ ಉ.ಕನ್ನಡ ಮೂರು ಜಿಲ್ಲೆಯಲ್ಲಿನ ಸುಮಾರು 320 ಕಿ.ಮೀ ವ್ಯಾಪ್ತಿಯ ಸಮುದ್ರದಲ್ಲಿ ಲೈಟ್ ಫಿಶಿಂಗ್ ಹಾಗೂ ಬುಲ್‌ಟ್ರಾಲ್ ಮೂಲಕ ಮೀನುಗಾರಿಕೆ ಅವೈಜ್ಞಾನಿಕವಾಗಿ ನಡೆಯುತ್ತಿದ್ದು, ಇದರಿಂದ ಸಣ್ಣ ಮೀನುಗಳು, ಮರಿ-ಮೊಟ್ಟೆಗಳು ನಾಶವಾಗಿ ಭವಿಷ್ಯದಲ್ಲಿ ಮತ್ಸ್ಯ ಸಂಪತ್ತು ಗಣನೀಯ ಪ್ರಮಾಣದ್ದಲ್ಲಿ ಕುಸಿಯುವ ಭೀತಿಯಿದೆ. ರಾಜ್ಯದಲ್ಲಿ ಸಮುದ್ರದಿಂದ 12 ನಾಟಿಕಲ್ ಮೈಲ್ ಪ್ರದೇಶದಲ್ಲಿ ಬೆಳಕು ಮೀನುಗಾರಿಕೆ ನಿಷೇಧಿಸಿ 2017 ರಲ್ಲಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದರೂ ಇನ್ನು ಈ ಅವ್ಯವಸ್ಥೆ ಅವ್ಯಾಹತವಾಗಿದೆ.
ಕಳೆದ ಡಿ.5ರಂದು ಮೀನುಗಾರಿಕಾ ಮತ್ತು ಬಂದರು ಸಚಿವ ಪತ್ರಿಕಾ ಹೇಳಿಕೆ ಹೊರಡಿಸಿ ರಾಜ್ಯದಲ್ಲಿ ನಿಷೇಧಿತ ಲೈಟ್ ಫಿಶಿಂಗ್ ಮೀನುಗಾರಿಕೆಗೆ ನಿಷೇಧ ಹೇರುವ ಯಾವುದೇ ಚಿಂತನೆ ಸರ್ಕಾರದ ಮುಂದೆ ಇಲ್ಲ ಎಂದು ತಿಳಿಸಿದ್ದು, ನಾಡದೋಣಿ ಮೀನುಗಾರರ ಅಸಮಧಾನಕ್ಕೆ ಕಾರಣವಾಗಿದೆ. ಕಳೆದ ವಿಧಾನಪರಿಷತ್ ಅಧಿವೇಶನದಲ್ಲಿ ರಾಜ್ಯದಲ್ಲಿ ಬೆಳಕು ಮೀನುಗಾರಿಕೆ ಮತ್ತು ಬುಲ್‌ಟ್ರಾಲ್ ಮೀನುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ ಎಂದು ಹೇಳಿದ್ದರು.
ಅವೈಜ್ಞಾನಿಕ ಮೀನುಗಾರಿಕೆ ಬಗ್ಗೆ ನಿಷೇಧದ ಆದೇಶವಿದ್ದರೂ ಮೀನುಗಾರಿಕಾ ಸಚಿವರು ಏಕಾಏಕಿಯಾಗಿ ರಾಜ್ಯದಲ್ಲಿ ಬೆಳಕು ಮೀನುಗಾರಿಕೆ ನಿಷೇಧ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ನಾಡ ದೋಣಿ ಮೀನುಗಾರರ ಬದುಕು ನಾಶ ಮಾಡಲು ಹೊರಟಿರುವುದು ಅತ್ಯಂತ ಖಂಡನೀಯ. -ನಾಗೇಶ ಖಾರ್ವಿ ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟ ಅಧ್ಯಕ್ಷ https://www.vijayavani.net/change-in-attitude-with-the-value-of-life https://www.vijayavani.net/take-steps-to-ensure-smooth-traffic