

ಮೈಸೂರು: 2021ನೇ ಸಾಲಿನಲ್ಲಿ ಶಿಷ್ಯವೇತನಕ್ಕೆ ಆಯ್ಕೆಯಾದ ಎಸ್‌ಸಿ, ಎಸ್ಟಿ ಸಂಶೋಧನಾ ವಿದ್ಯಾರ್ಥಿಗಳಿಗೆ ಹಿಂಬಾಕಿ ಶಿಷ್ಯವೇತನ ನೀಡದ ಮೈಸೂರು ವಿವಿಯ ದುರಾಡಳಿತ ಖಂಡಿಸಿ ವಿಶ್ವವಿದ್ಯಾಲಯ ಸಂಶೋಧಕರ ಸಂಘದಿಂದ ಕ್ರಾಫರ್ಡ್ ಹಾಲ್ ಮುಂಭಾಗ ಅನಿರ್ದಿಷ್ಟಾವಧಿ ಧರಣಿಯನ್ನು ಗುರುವಾರದಿಂದ ಆರಂಭಿಸಲಾಯಿತು.
2020-21ನೇ ಶೈಕ್ಷಣಿಕ ಸಾಲಿನಲ್ಲಿ ಮೈಸೂರು ವಿವಿಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿಶೇಷ ಘಟಕದ ವತಿಯಿಂದ ನೀಡುವ ಸಂಶೋಧನಾ ಶಿಷ್ಯವೇತನಕ್ಕೆ 46 ಜನರನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಶಿಷ್ಯವೇತನದ ಆದೇಶ ಪ್ರತಿಯಲ್ಲಿ ಪಿಎಚ್.ಡಿ ಪದವಿಗೆ ತಾತ್ಕಾಲಿಕ ನೋಂದಣಿಯಾದ ದಿನಾಂಕದಿಂದ 5 ವರ್ಷಗಳವರಗೆ ಶಿಷ್ಯವೇತನ ನೀಡಿದ್ದೇವೆ ಎಂದು ನಮೂದಿಸಿದ್ದಾರೆ. ಎಲ್ಲ ಸಂಶೋಧನಾ ವಿದ್ಯಾರ್ಥಿಗಳು 2017-18 ಮತ್ತು 2019-20ನೇ ಶೈಕ್ಷಣಿಕ ಸಾಲಿನಲ್ಲಿ ಪಿಎಚ್.ಡಿಗೆ ತಾತ್ಕಾಲಿಕ ನೋಂದಣಿಯಾಗಿದ್ದು 2021ಕ್ಕಿಂತ ಹಿಂದಿನ ಸಾಲಿನ ಶಿಷ್ಯ ವೇತನವನ್ನು ಯಾರೂ ಪಡೆದಿಲ್ಲ. ಆದರೂ ನೊಂದಣಿಯಾದ ದಿನಾಂಕದಿಂದಲೇ ಶಿಷ್ಯವೇತನ ನೀಡಿದ್ದೇವೆ ಎಂದು ಆದೇಶ ಪ್ರತಿಯಲ್ಲಿ ನಮೂದಿಸಿದ್ದಾರೆ ಎಂದು ಕಿಡಿಕಾರಿದರು.
ಕಳೆದ ಎರಡು ವರ್ಷಗಳಿಂದ ವಿಶ್ವವಿದ್ಯಾಲಯಕ್ಕೆ ನಿರಂತರವಾಗಿ ಮನವಿ ಮಾಡುತ್ತ ಬಂದರೂ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ. ಕೇವಲ ಹುಸಿ ಭರವಸೆಗಳನ್ನು ನೀಡುತ್ತ, ವಿವಿಯ ಆರ್ಥಿಕ ಸ್ಥಿತಿಯ ಕುರಿತು ಹಸಿ ಸುಳ್ಳುಗಳನ್ನು ಹೇಳಿ ಕಾಲಹರಣ ಮಾಡುತ್ತಿದ್ದಾರೆ. ಈ ಹಿಂದಿನ ಸಾಲಿನ ಶಿಷ್ಯವೇತನದ ಹಣವನ್ನೂ ನೀಡದೆ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಕೂಡಲೇ ಹಿಂಬಾಕಿ ಹಣವನ್ನು ಮಂಜೂರು ಮಾಡಿಕೊಡಬೇಕೆಂದು ಆಗ್ರಹಿಸಿದರು.
ಧರಣಿಯಲ್ಲಿ ಸಂಘದ ಅಧ್ಯಕ್ಷ ಮರಿದೇವಯ್ಯ, ಸಂಶೋಧಕರಾದ ಪ್ರತಾಪ್ ಸಿ.ಎಂ, ಕಿರಣ್.ಡಿ, ರವಿ ಕೆ.ಎಂ, ರಾಜೇಂದ್ರ, ಅಶ್ವಿನಿ ಸೇರಿದಂತೆ ಹಲವರು ಭಾಗವಹಿಸಿದ್ದರು.