

ಬಂಟ್ವಾಳ: ಉಲಾಯಿಬೆಟ್ಟುವಿನಲ್ಲಿ ಪದ್ಮನಾಭ ಕೋಟ್ಯಾನ್ ಮನೆ ದರೋಡೆ ಪ್ರಕರಣದ ಪ್ರಮುಖ ಆರೋಪಿಗಳು ಮತ್ತು ದರೋಡೆಗೈದ ಸ್ವತ್ತು ವಶಪಡಿಸಿಕೊಳ್ಳುವಂತೆ ಮೂರ್ತೆದಾರರ ಮಹಾಮಂಡಲದ ಅಧ್ಯಕ್ಷ ಕೆ.ಸಂಜೀವ ಪೂಜಾರಿ ನೇತೃತ್ವದಲ್ಲಿ ಆಡಳಿತ ಮಂಡಳಿಯ ನಿಯೋಗ ಮಂಗಳೂರು ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಶುಕ್ರವಾರ ಮನವಿ ಸಲ್ಲಿಸಿತು.
ಪದ್ಮನಾಭ ಕೋಟ್ಯಾನ್ ಮೂರ್ತೆದಾರರ ಮಹಾಮಂಡಲದ ನಿರ್ದೇಶಕರಾಗಿದ್ದು, ಪ್ರಕರಣದಲ್ಲಿ ಕೆಲವು ಆರೋಪಿಗಳನ್ನು ಬಂಧಿಸಿದ್ದರೂ ದರೋಡೆ ಮಾಡಿದ ನಗದು ಹಾಗೂ ಚಿನ್ನಾಭರಣ ವಶಕ್ಕೆ ಪಡೆದಿಲ್ಲ. ದರೋಡೆಗೆ ಸಂಬಂಧಪಟ್ಟ ವಸ್ತುಗಳು ಇವೆ ಎಂದು ಹೇಳಲಾದ ಮುಖ್ಯ ಆರೋಪಿಗಳು ಪತ್ತೆಯಾಗಿಲ್ಲ. ಜಿಲ್ಲೆಯ ಜನತೆಯನ್ನು ಆತಂಕಗೊಳಿಸಿದ ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಗಳನ್ನು ಬಂಧಿಸಿ ದರೋಡೆಯಾದ ವಸ್ತುಗಳನ್ನು ಸ್ವಾಧೀನಪಡಿಸುವಂತೆ ಮನವಿಯಲ್ಲಿ ಕೋರಲಾಗಿದೆ.
ಉಪಾಧ್ಯಕ್ಷ ರಾಜೇಶ್ ಸುವರ್ಣ, ನಿರ್ದೇಶಕರಾದ ಆರ್.ಸಿ.ನಾರಾಯಣ್, ವಿಶ್ವನಾಥ ಬಿ, ವಿಜಯ್ ಕುಮಾರ್ ಸೊರಕೆ, ಗಣೇಶ್ ಮೂಡುಪೆರಾರ, ಶಿವಪ್ಪ ಸುವರ್ಣ, ಸಿಐಒ ಕಿಶೋರ್ ಕುಮಾರ್ ಉಪಸ್ಥಿತರಿದ್ದರು.