

ಶಿರಸಿ: ಶಿರಸಿ ನಗರಕ್ಕೆ ನೀರು ಪೂರೈಸುವ ಕೆಂಗ್ರೆ ಭಾಗದ ಹಳೆಯ ಪೈಪ್ಗಳು ಕಳ್ಳತನವಾಗಿರುವುದು ನಗರಸಭೆಗೆ ಕಪ್ಪು ಚುಕ್ಕೆ ಆಗುತ್ತಿದೆ. ಆಡಳಿತ ನಡೆಸುವವರ ತಪ್ಪಿಲ್ಲದಿದ್ದರೂ ಸಾರ್ವಜನಿಕರಿಗೆ ಉತ್ತರಿಸಲು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಇನ್ನಷ್ಟು ಚುರುಕುಗೊಳಿಸಿ ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಬಿಜೆಪಿ ನಗರ ಮಂಡಲ ಸದಸ್ಯರು ಉಪವಿಭಾಗಾಗಾಧಿಕಾರಿ ಹಾಗೂ ಡಿವೈಎಸ್ ಪಿ ಅವರಿಗೆ ಮನವಿ ನೀಡಿದರು.
ಗುರುವಾರ ನಗರ ಮಂಡಲ ಅಧ್ಯಕ್ಷ ಆನಂದ ಸಾಲೇರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಮನವಿ ಸಲ್ಲಿ ಸಲಾಯಿತು.
ಕೆಲವು ದಿನಗಳ ಹಿಂದೆ ಶಿರಸಿಯ ಕೆಂಗ್ರೆಹೊಳೆ ಭಾಗದಲ್ಲಿ ನೀರಿನ ಹಳೆಯ ಪೈಪ್ಗಳನ್ನು ಕಳವು ಮಾಡಿರುವ ಪ್ರಕರಣವು ಗಂಭೀರ ಚರ್ಚೆ ಆಗುತ್ತಿದೆ. ಇದು ಶಿರಸಿ ನಗರಸಭೆಯ ಸ್ವತ್ತು ಆಗಿರುವುದರಿಂದ ಈ ಕುರಿತು ಈಗಾಗಲೇ ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪೈಪ್ಗಳನ್ನು ಕದ್ದವರನ್ನು ಹಾಗೂ ಈ ಕಳ್ಳತನದಲ್ಲಿ ಭಾಗಿ ಆಗಿರುವವರನ್ನು ಆದಷ್ಟು ಬೇಗ ಬಂಧಿಸಿ ಸತ್ಯಾಂಶವನ್ನು ಜನತೆಯ ಮುಂದಿಡಲು ಪೊಲೀಸ್ ಇಲಾಖೆ ತಕ್ಷಣದಲ್ಲಿ ಕಾರ್ಯ ಪ್ರವೃತ್ತರಾಗಲು ವಿನಂತಿಸಿಕೊಳ್ಳುತ್ತೇವೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರಕರಣ ನಡೆದು ವಾರ ಕಳೆದರೂ ಯಾವುದೇ ರೀತಿಯ ಉತ್ತರ ಈವರೆಗೂ ಕಂಡುಬಂದಿಲ್ಲ. ಅಲ್ಲದೆ ಶಿರಸಿ ನಗರದ ಗೌರವಾನ್ವಿತ ಸದಸ್ಯರ ವಿರುದ್ಧ ಅಪಪ್ರಚಾರ ನಡೆಸುತ್ತಿರುವುದು ಕಂಡುಬಂದಿದೆ. ಕಾರಣ ಈ ಪ್ರಕರಣದ ತಪ್ಪಿತಸ್ಥರು ಯಾರೇ ಆಗಿದ್ದರೂ ಎಷ್ಟೇ ಪ್ರಭಾವಿಗಳಾಗಿದ್ದರೂ ತಕ್ಷಣ ತನಿಖೆ ನಡೆಸಿ ಅವರನ್ನು ಬಂಧಿಸಬೇಕೆಂದು ಭಾರತೀಯ ಜನತಾ ಪಾರ್ಟಿ, ಭಾರತೀಯ ಜನತಾ ಪಾರ್ಟಿಯ ನಗರಸಭಾ ಸದಸ್ಯರು ಆಗ್ರಹಿಸಿದರು.
ನಗರಸಭೆ ಅಧ್ಯಕ್ಷೆ ಶರ್ವಿುಳಾ ಮಾದನಗೇರಿ ಮಾತನಾಡಿ, ಈ ಘಟನೆ ಪ್ರಾಮಾಣಿಕರ ಮೇಲೂ ಸಾರ್ವಜನಿಕರ ಶಂಕೆ ವ್ಯಕ್ತವಾಗಿದೆ. ತನಿಖೆ ಆಗಬೇಕು ಎಂದರು.
ನಂದನ ಸಾಗರ, ಕಪ್ಪು ಚುಕ್ಕೆ ಆದ ಈ ಪ್ರಕರಣ ಸಮಗ್ರ ತನಿಖೆ ಆಗಬೇಕು. ಕಳ್ಳತನದಲ್ಲಿ ಭಾಗಿಯಾದವರು ನಗರಸಭೆ ಸದಸ್ಯರಿದ್ದರೆ ಪಕ್ಷದಿಂದಲೂ ಉಚ್ಛಾಟಿಸುತ್ತೇವೆ ಎಂದರು.
ನಗರಸಭೆ ಉಪಾಧ್ಯಕ್ಷ ರಮಾಕಾಂತ ಭಟ್ಟ, ಜಿಲ್ಲಾ ರೈತಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ, ಮಾಧ್ಯಮ ವಕ್ತಾರ ಡಾನಿ ಡಿಸೋಜ, ಸಾಮಾಜಿಕ ಜಾಲ ತಾಣದ ಮುಖ್ಯಸ್ಥ ರವಿ ಶೆಟ್ಟಿ, ಗಣಪತಿ ನಾಯ್ಕ, ವೀಣಾ ಶೆಟ್ಟಿ, ಶ್ರೀಕಾಂತ ನಾಯ್ಕ, ನಾಗರಾಜ ನಾಯ್ಕ, ದೀಪಾ ಮಹಾಲಿಂಗಣ್ಣನವರ, ರಮೇಶ ಆಚಾರಿ, ಕುಮಾರ ಬೋರಕರ ಇತರರು ಇದ್ದರು.