

ಹನೂರು: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಕಡೆಗೆ ಶೂ ಎಸೆದ ವಕೀಲನನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಶನಿವಾರ ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಯಿತು.
ಮ.ಬೆಟ್ಟದ ಪಾರ್ಕಿಂಗ್ ಸ್ಥಳದಲ್ಲಿ ನೆರೆದಿದ್ದ ಪ್ರತಿಭಟನಕಾರರು ಮೆರವಣಿಗೆಯ ಮೂಲಕ ಬಸ್ ನಿಲ್ದಾಣಕ್ಕೆ ತೆರಳಿ ಮಾನವ ಸರಪಳಿ ನಿರ್ಮಿಸಿ ವಕೀಲ ರಾಕೇಶ್‌ಕುಮಾರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪ್ರತಿಭಟನಕಾರರು ಮಾತನಾಡಿ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರು ಉನ್ನತ ಹುದ್ದೆ ಅಲಂಕರಿಸುವುದರ ಮೂಲಕ ಗೌರವ ಸ್ಥಾನದಲ್ಲಿದ್ದಾರೆ. ಅವರ ಮೇಲೆ ವಕೀಲ ರಾಕೇಶ್‌ಕುಮಾರ್ ಶೂ ಎಸೆಯುವ ಪ್ರಯತ್ನ ಮಾಡಿರುವುದು ನಿಜಕ್ಕೂ ಖಂಡನೀಯ. ಇದು ದೇಶ ಹಾಗೂ ಸಂವಿಧಾನಕ್ಕೆ ಮಾಡಿದ ಅಪಮಾನ. ಆದ್ದರಿಂದ ಇವರನ್ನು ಕೂಡಲೇ ಬಂಧಿಸಿ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಬಳಿಕ ಗ್ರಾಮ ಪಂಚಾಯಿತಿಗೆ ತೆರಳಿದ ಪ್ರತಿಭಟನಕಾರರು ಪಿಡಿಒ ಕಿರಣ್‌ಕುಮಾರ್ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ದಸಂಸ ಸಮಿತಿ ಸಂಘಟನಾ ಸಂಚಾಲಕ ದೊರೆಸ್ವಾಮಿ, ಡಾ. ಬಿ.ಆರ್ ಅಂಬೇಡ್ಕರ್ ಸಂಘದ ಅಧ್ಯಕ್ಷ ವಿಜಯಕುಮಾರ್, ಪದಾಧಿಕಾರಿಗಳಾದ ಮಾದೇವ, ಗುರುದೇವ ಹಾಗೂ ಇನ್ನಿತರರು ಇದ್ದರು.