

ಬಾದಾಮಿ: ನದಾಫ-ಪಿಂಜಾರ ಸಮಾಜದ ಏಳಿಗೆಗಾಗಿ ರಾಜ್ಯ ಸರ್ಕಾರ ನಿಗಮಕ್ಕೆ ಘೋಷಣೆ ಮಾಡಿದ್ದು, ಅದಕ್ಕೆ ತಕ್ಷಣ ಅಧ್ಯಕ್ಷರ ನೇಮಕ ಮಾಡುವುದರ ಜತೆಗೆ ಸೂಕ್ತ ಅನುದಾನ ನೀಡಬೇಕೆಂದು ತಾಲೂಕು ಘಟಕದ ಅಧ್ಯಕ್ಷ ವೈ.ಎಫ್. ಶರೀಫ್ ಒತ್ತಾಯಿಸಿದರು.
ನಗರದ ಕಾನಿಪ ಭವನದಲ್ಲಿ ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ನದಾ, ಪಿಂಜಾರ ಸಮಾಜ ತೀರ ಹಿಂದುಳಿದಿದ್ದು, ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು. ಬಜೆಟ್ ಪೂರ್ವಭಾವಿ ಸಭೆಯಲ್ಲಿ ನಮ್ಮ ಸಮಾಜದ ಕೋರಿಕೆಗಳ ಮನವಿಯನ್ನು ಮುಖ್ಯಮಂತ್ರಿಗಳಿಗೆ ಮತ್ತು ಸಚಿವ ಸಂಪುಟದ ಸಹದ್ಯೋಗಿಗಳಿಗೆ ಸಲ್ಲಿಸಲಾಗಿದೆ. ಆದರೆ, ಬಜೆಟ್‌ನಲ್ಲಿ ನಮ್ಮ ಯಾವ ಕೋರಿಕೆಗೂ ಸ್ಪಂದಿಸದೆ ಇರುವುದು ನಮಗೆ ನೋವು ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮಾಜಕ್ಕೆ ಪ್ರವರ್ಗವನ್ನು ನೀಡಿದ್ದರೂ ಶೇಕಡವಾರು ಮೀಸಲಾತಿ ಪ್ರಕಟಿಸದಿರುವುದು ಉದ್ಯೋಗವಕಾಶಕ್ಕೆ ಹೊಡೆತ ಬಿದ್ದಿದೆ. ಇನ್ನು ವಿದ್ಯಾರ್ಥಿ ವೇತನ ಪಡೆಯಲು ಅಸಾಧ್ಯವಾದ ವಾತಾವರಣವಿದೆ. ನಮ್ಮ ಸಮಾಜ ಯಾವ ಸಮುದಾಯದಲ್ಲಿ ಬರುತ್ತದೆ ಎಂಬುದನ್ನು ಸ್ಪಷ್ಟಪಡಿಸಬೇಕಾದ ಅವಶ್ಯಕತೆ ಇದೆ ಎಂದರು.
ನಮಗೆ ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಮತ್ತು ಅಲ್ಪಸಂಖ್ಯಾತ ಇಲಾಖೆಯಲ್ಲಿಯೂ ಅವಕಾಶ ದೊರಕುತ್ತಿಲ್ಲ. ಹೀಗಾಗಿ ನಮ್ಮ ಸಮಾಜದ ಮಕ್ಕಳ ಶಿಕ್ಷಣಕ್ಕೆ ಮತ್ತು ಉದ್ಯೋಗಕ್ಕೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸರ್ಕಾರ ಕ್ರಮವಹಿಸಿ ಪರಿಹಾರ ಕಲ್ಪಿಸಬೇಕು ಎಂದರು.
ಉಪಾಧ್ಯಕ್ಷ ಜಹಾಂಗೀರ ನದಾ, ಪ್ರ.ಕಾ ಕಾಲೇಸಾಬ ನದಾ, ಎಚ್.ಎಚ್.ನದಾ, ಎಂ.ಜೆ. ಚವಡಿ, ಅಲ್ಲಾಭಕ್ಷ ಶೇಖ, ಪತ್ತೇಸಾಬ ನದಾ, ರಿಯಾಜ ನರೆಗಲ್ಲ, ಶಕೀಲ ಪಿಂಜಾರ ಮತ್ತಿತರರಿದ್ದರು.