ಪದವೀಧರ ಶಿಕ್ಷಕರ ನೇಮಕಾತಿ ತಿದ್ದುಪಡಿಗೆ ಆಗ್ರಹ

12sirsi3
Published on

ಶಿರಸಿ: ಪ್ರಾಥಮಿಕ ಶಾಲಾ ಸೇವಾ ನಿರತ ಪದವೀಧರ ಶಿಕ್ಷಕರಿಗೆ ಸಂಬಂಧಿಸಿದ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಕಡತಕ್ಕೆ ತಕ್ಷಣ ಅನುಮೋದನೆ ನೀಡುವಂತೆ ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರು ಡಿಡಿಪಿಐ ಮೂಲಕ ಮುಖ್ಯಮಂತ್ರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಬಿಎಡ್ ಶಿಕ್ಷಣ ಪೂರೈಸಿರುವ ಶಿಕ್ಷಕರು 1ರಿಂದ 7ನೇ ತರಗತಿವರೆಗೆ ಪಾಠ ಮಾಡಲು ಸಮರ್ಥರಿದ್ದರೂ, ಅವರನ್ನು 1ರಿಂದ 5ನೇ ತರಗತಿವರೆಗಿನ ಶಿಕ್ಷಣಕ್ಕೆ ಸೀಮಿತಗೊಳಿಸಲಾಗಿದೆ. ಇದರಿಂದಾಗಿ ಯಾವುದೇ ಪದೋನ್ನತಿ ಹಾಗೂ ಹೆಚ್ಚಿನ ಸೇವೆಯನ್ನು ನೀಡಲು ನಮಗೆ ಸಾಧ್ಯವಾಗುತ್ತಿಲ್ಲ. ಅಲ್ಲದೆ, ಶಿಕ್ಷಕರನ್ನು ಚುನಾವಣಾ ಕಾರ್ಯಕ್ಕೆ ನಿಯೋಜನೆ ಮಾಡುತ್ತಿರುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ 2024ರ ಆಗಸ್ಟ್ 12ರಂದು ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಮಸ್ಯೆಯನ್ನು ಒಂದು ತಿಂಗಳ ಒಳಗಾಗಿ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಒಂದು ವರ್ಷವೇ ಕಳೆದಿದ್ದರೂ ಇನ್ನೂ ಸಮಸ್ಯೆ ಇತ್ಯರ್ಥಗೊಳಿಸಿಲ್ಲ. ಆದ್ದರಿಂದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಗಸ್ಟ್ 25 ರೊಳಗಾಗಿ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ಮುಂದುವರೆಸುವುದಾಗಿ ಮನವಿಯಲ್ಲಿ ತಿಳಿಸಲಾಗಿದೆ.

ಶಿರಸಿ ಶೈಕ್ಷಣಿಕ ಜಿಲ್ಲಾ ಶಿಕ್ಷಕರ ಸಂಘದ ಅದ್ಯಕ್ಷ ಬಾಲಚಂದ್ರ ಪಟಗಾರ, ಪ್ರಧಾನ ಕಾರ್ಯದರ್ಶಿ ಯಶವಂತ ನಾಯ್ಕ, ತಾಲೂಕು ಅಧ್ಯಕ್ಷ ಸುರೇಶ ಪಟಗಾರ, ಸತೀಶ ನಾಯ್ಕ, ಸತೀಶ ಹೆಗಡೆ, ಸುರೇಶ ಪಟಗಾರ, ಪ್ರದೀಪ ಕುಲಕರ್ಣಿ, ಆರ್.ಆರ್. ಹೆಗಡೆ ಇತರರಿದ್ದರು. ಶಿಕ್ಷಣಾಧಿಕಾರಿ ತ್ರಿವೇಣಿ ಮನವಿ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net