ಬಸವಭವನಕ್ಕೆ ನಿವೇಶನ ಮಂಜೂರು ಮಾಡಲು ಆಗ್ರಹ

IMG-20240726-WA0028
Published on

ತಿ.ನರಸೀಪುರ: ತಾಲೂಕು ಕೇಂದ್ರವಾದ ಪಟ್ಟಣದಲ್ಲಿ ಬಸವಭವನ ನಿರ್ಮಾಣಕ್ಕೆ ಸರ್ಕಾರದಿಂದ ನಿವೇಶನ ಮಂಜೂರು ಮಾಡುವಂತೆ ಸಮುದಾಯದ ಮುಖಂಡರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ನೂತನ ಅಧ್ಯಕ್ಷರು ಹಾಗೂ ನಿರ್ದೇಶಕರು ತಾಲೂಕು ಆಡಳಿತವನ್ನು ಆಗ್ರಹಿಸಿದ್ದಾರೆ.


ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕ ಚುನಾವಣೆ ಮೂಲಕ ಆಯ್ಕೆಯಾಗುತ್ತಿದಂತೆ ಸಮುದಾಯದ ಸಾಮಾಜಿಕ ಕೆಲಸವನ್ನು ವಿಧ್ಯುಕ್ತವಾಗಿ ಆರಂಭಿಸಿದ್ದು, ಮುಖಂಡರೊಂದಿಗೆ ತಾಲೂಕು ಕಚೇರಿಗೆ ತೆರಳಿ ತಹಸೀಲಾರ್ ಟಿ.ಜಿ. ಸುರೇಶಾಚಾರ್ ಅವರನ್ನು ಭೇಟಿಯಾಗಿ, ಪಟ್ಟಣದಲ್ಲಿ ಬಸವಭವನ ನಿರ್ಮಾಣಕ್ಕೆ ಅಗತ್ಯವಿರುವ ನಿವೇಶನವನ್ನು ಮಂಜೂರು ಮಾಡುವಂತೆ ಮನವಿ ಸಲ್ಲಿಸಲಾಯಿತು.


ಮಹಾಸಭಾ ಅಧ್ಯಕ್ಷ ಎಸ್.ಎಂ.ಆರ್. ಪ್ರಕಾಶ್ ಮಾತನಾಡಿ, ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರರ ಸಮುದಾಯ ಭವನಗಳಿವೆ. ನಂಜನಗೂಡು ಮಾದರಿಯಲ್ಲಿ ನರಸೀಪುರ ಭವನ ನಿರ್ಮಾಣವಾಗಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿಯೇ ಉಳಿದಿದೆ. ಈ ಬಗ್ಗೆ ಇಲ್ಲಿನ ಜನಪ್ರತಿನಿಧಿಗಳಿಗೂ ಮನವಿ ಮಾಡಿದ್ದೇವೆ. ಅವರಿಂದ ನಿವೇಶನ ಮತ್ತು ಅನುದಾನದ ಭರವಸೆಯಷ್ಟೇ ಸಿಕ್ಕಿದ್ದು, ಸಮುದಾಯದ ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಅಗತ್ಯವಿರುವ ಬಸವಭವನಕ್ಕೆ ತಾಲೂಕು ಆಡಳಿತ ನಿವೇಶನವನ್ನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.


ತಹಸೀಲ್ದಾರ್ ಟಿ.ಜಿ. ಸುರೇಶಾಚಾರ್ ಮಾತನಾಡಿ, ಬಸವಭವನ ನಿರ್ಮಾಣಕ್ಕೆ ನಿವೇಶನ ನೀಡುವಂತೆ ಸಚಿವರಿಂದಲೂ ತಾಲೂಕು ಆಡಳಿತಕ್ಕೆ ಸೂಚನೆ ನೀಡಿದ್ದಾರೆ. ಈ ಸಂಬಂಧ ಕಂದಾಯ ಇಲಾಖೆ ಅಧಿಕಾರಿಗಳು ನಿವೇಶನ ಕಲ್ಪಿಸಲು ಸರ್ಕಾರಿ ಜಾಗವನ್ನು ಪತ್ತೆ ಹಚ್ಚುವ ಕಾರ್ಯವನ್ನು ಕೈಗೊಂಡಿದ್ದೇವೆ. ಸಾಧ್ಯವಾದಷ್ಟು ಬೇಗ ನಿವೇಶನ ಮಂಜೂರು ಮಾಡುವ ಪ್ರಸ್ತಾಪವನ್ನು ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತೇವೆ ಎಂದು ಭರವಸೆ ನೀಡಿದರು.


ವೀರಶೈವ ಲಿಂಗಾಯತ ಜನಪ್ರತಿನಿಧಿಗಳು ಸೇರಿದಂತೆ ಹಿರಿಯ ಮುಖಂಡರು, ಮಹಾಸಭಾ ನಿರ್ದೇಶಕರುಗಳು ಹಾಗೂ ಸದಸ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net