

ಹಾನಗಲ್ಲ: ತಾಲೂಕಿನ ಕಾಮನಹಳ್ಳಿ ವಿಭಾಗದ ಹುಣಶೆಟ್ಟಿಕೊಪ್ಪ ಭಾಗದ ರೈತರ ಕೊಳವೆಬಾವಿಗಳಿಗೆ ಹೆಸ್ಕಾಂ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡುತ್ತಿಲ್ಲ. ಈ ಸಮಸ್ಯೆ ಕೂಡಲೇ ಸರಿಪಡಿಸಬೇಕು ಎಂದು ಹುಣಶೆಟ್ಟಿಕೊಪ್ಪ ಗ್ರಾಮದ ರೈತರು ಪಟ್ಟಣದ ಹೆಸ್ಕಾಂ ಕಚೇರಿ ಗುರುವಾರ ಎದುರು ಧರಣಿ ನಡೆಸಿ ಮನವಿ ಸಲ್ಲಿಸಿದರು.
ಕಾಮನಹಳ್ಳಿ ಹಾಗೂ ಹಿರೇಕಣಗಿ ಫೀಡರ್‌ಗಳಿಗೆ ಹಾನಗಲ್ಲಿನ ೩೩ ಕೆವಿ ಸ್ಟೇಶನ್‌ನಿಂದ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಆದರೆ, ಸಮರ್ಪಕವಾಗಿ ವಿದ್ಯುತ್ ಕೊಡದಿರುವುದರಿಂದ ಬೆಳೆಗಳು ಒಣಗಿ ಹೋಗುತ್ತಿವೆ. ಹೆಸ್ಕಾಂ ಇಲಾಖೆ ನಿರ್ಧಾರದಂತೆ ಪ್ರತಿದಿನ ೭ ತಾಸು ವಿದ್ಯುತ್ ನೀಡಬೇಕಿದ್ದರೂ, ೬ ತಾಸಿಗೆ ಇಳಿಸಲಾಗಿದೆ. ಅದನ್ನೂ ಸರಿಯಾಗಿ ನೀಡುತ್ತಿಲ್ಲ. ಮಧ್ಯದಲ್ಲಿ ಬಹಳಷ್ಟು ಬಾರಿ ವಿದ್ಯುತ್ ನಿಲುಗಡೆ ಮಾಡಲಾಗುತ್ತಿದೆ. ಹೀಗಾಗಿ ಅಡಕೆ, ಬಾಳೆ ತೋಟಗಳು, ಗೋವಿನಜೋಳ, ಸೂರ್ಯಕಾಂತಿ ಸೇರಿದಂತೆ ಮತ್ತಿತರ ಬೆಳೆಗಳು ನೀರಿಲ್ಲದೇ ಸೊರಗುತ್ತಿವೆ. ರೈತರ ಕೊಳವೆ ಬಾವಿಗಳಿಗೆ ಹೆಸ್ಕಾಂ ಸಮರ್ಪಕವಾಗಿ ವಿದ್ಯುತ್ ಪೂರೈಸದಿದ್ದರೆ ಹೋರಾಟ ಉಗ್ರಗೊಳಿಸಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ರೈತರಾದ ಎ.ಎಸ್. ನಂದಿಕೋಲ, ಸುನೀಲ ಪಾಟೀಲ, ಅಜ್ಜಪ್ಪ ದೊಡ್ಡಮನಿ, ಕೆ.ವಿ. ಉಜ್ಜನಗೌಡ್ರ, ಎಂ.ಬಿ. ಗೂಳಣ್ಣನವರ, ಎಂ.ಎಸ್. ಕರೇಗೌಡ್ರ, ಪ್ರಕಾಶ ತೆಲಗಾರ, ಶಂಭು ನಂದಿಕೋಲ, ಎಸ್.ವಿ. ಪಾಟೀಲ, ಜಿ.ಕೆ. ಬಳಿಗಾರ, ವಿಶ್ವನಾಥ ಪಾಟೀಲ ಇತರರಿದ್ದರು.