ಸಮರ್ಪಕ ಕುಡಿಯುವ ನೀರು ಪೂರೈಸಲು ಒತ್ತಾಯ

drinking water supply
Published on

ಲಕ್ಷ್ಮೇಶ್ವರ: ಕುಡಿಯುವ ನೀರಿನ ಸಮಸ್ಯೆ ಸರಿಪಡಿಸುವಂತೆ ಆಗ್ರಹಿಸಿ ಪಟ್ಟಣದ 18ನೇ ವಾರ್ಡ್​ನ ನಿವಾಸಿಗಳು ಪುರಸಭೆಗೆ ದೌಡಾಯಿಸಿ ಪುರಸಭೆ ಕಚೇರಿ ವ್ಯವಸ್ಥಾಪಕಿ ಮಂಜುಳಾ ಹೂಗಾರ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ವಾರ್ಡ್ ನಿವಾಸಿ ನಿಂಗಪ್ಪ ಬಾಲೆಹೊಸೂರು, ಭರಮಪ್ಪ ಕಡ್ಡಿಪೂಜಾರ, ಯಲ್ಲಪ್ಪ ಕಡ್ಡಿಪೂಜಾರ ಮಾತನಾಡಿ, ನಮ್ಮ ವಾರ್ಡ್​ನಲ್ಲಿ ಕಳೆದ 20-22 ದಿನಗಳಿಂದ ನೀರು ಪೂರೈಸಿಲ್ಲ. ಕಿಲೋಮೀಟರ್​ಗಟ್ಟಲೆ ಅಲೆದಾಡಿ ಕುಡಿಯುವ ನೀರು ಹೊತ್ತುಕೊಂಡು ಬರುವಂತಹ ಪರಿಸ್ಥಿತಿ ನಿರ್ವಣವಾಗಿದೆ. ನೀರಿನ ತೆರಿಗೆ ಕಟ್ಟದಿದ್ದರೆ ಪುರಸಭೆಯವರು ನಲ್ಲಿ ಸಂಪರ್ಕ ಕಡಿತ ಮಾಡುತ್ತಾರೆ. ಆದರೆ, ಸರಿಯಾಗಿ ನೀರು ಪೂರೈಸುತ್ತಿಲ್ಲ ಎಂದು ಆರೋಪಿಸಿದರು.

ನಮ್ಮ ಓಣಿಗೆ ಇಪ್ಪತ್ತು ದಿನಗಳಾದರೂ ಕುಡಿಯುವ ನೀರು ಬಂದಿಲ್ಲ. ಹೀಗಾದರೆ ನಾವು ಹೇಗೆ ಜೀವನ ನಿರ್ವಹಿಸಬೇಕು. ವಾರ್ಡ್​ಗೆ ನೀರು ಬಿಡುವಂತೆ ಪುರಸಭೆಗೆ ಬಂದು ಕೇಳಿದರೆ ನಮ್ಮ ಮಾತಿಗೆ ಯಾರೋಬ್ಬರು ಸ್ಪಂದಿಸುವುದಿಲ್ಲ. ವೇಳೆಗೆ ಸರಿಯಾಗಿ ನೀರು ಬಿಡುವಂತೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಮುಂದಿನ ದಿನಗಳಲ್ಲಿ ಸರಿಯಾಗಿ ನೀರು ಬಿಡದಿದ್ದರೆ ಖಾಲಿ ಕೊಡಗಳೊಂದಿಗೆ ಪುರಸಭೆಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.

ವಾರ್ಡ್​ನ ಮಹಿಳೆಯರಾದ ಜಯವ್ವ ಬಾಲೇಹೊಸೂರು, ಹೊಳಲಮ್ಮ ಕಡ್ಡಿಪೂಜಾರ ಮಾತನಾಡಿ, ಕುಡಿಯುವ ನೀರು ನಮಗೆ 20-25 ದಿವಸಕ್ಕೆ ಬಿಡುತ್ತಾರೆ, ಅಲ್ಲಿಯವರೆಗೂ ನೀರು ತುಂಬಿಟ್ಟುಕೊಳ್ಳುವುದು ಹೇಗೆ, ಇಷ್ಟು ದಿವಸವಾದರೂ ಇದೇ ನೀರು ಕುಡಿಯುವಂತಹ ಪರಿಸ್ಥಿತಿ ಇದೆ. ಓಣಿಯಲ್ಲಿರುವ ಚರಂಡಿಗಳನ್ನು ವರ್ಷಕ್ಕೆ ಅಥವಾ ಆರು ತಿಂಗಳಿಗೋ ಒಮ್ಮೆ ಸ್ವಚ್ಛ ಮಾಡುತ್ತಾರೆ. ಹಲವು ದಿನಗಳಿಂದ ಗಟಾರ್ ತುಂಬಿಕೊಂಡು ಓಣಿಯಲ್ಲಿ ಗಬ್ಬು ವಾಸನೆ ತುಂಬಿಕೊಂಡಿವೆ. ಇವು ಪುರಸಭೆಯವರಿಗೆ ಕಾಣುವುದಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಂಜುನಾಥ ಕಡ್ಡಿಪೂಜಾರ, ದುಂಡಪ್ಪ ಕಡ್ಡಿಪೂಜಾರ, ಹನಮಂತಪ್ಪ ಕಡ್ಡಿಪೂಜಾರ, ಲಕ್ಷ್ಮವ್ವ, ಕಮಲವ್ವ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net