

ನವಲಗುಂದ: ತಾಲೂಕಿನ ಇಬ್ರಾಹಿಂಪೂರ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ರೈತರು ಹೊಲದಲ್ಲಿದ್ದ ಯರಿಮಣ್ಣು ರಸ್ತೆಗೆ ಹಾಕಿರುವುದರಿಂದ ಸವಾರರು ವಾಹನ ಚಲಾಯಿಸುವ ಸಂದರ್ಭದಲ್ಲಿ ಜರಿದು ಬಿದ್ದ ಘಟನೆ ಸಂಭವಿಸುತ್ತಿವೆ. ಈ ಕುರಿತು ಕಳೆದ ಎರಡು ತಿಂಗಳಿಂದ ದೂರು ನೀಡುತ್ತಿದ್ದರೂ ಪ್ರಯೋಜನವಾಗಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆ ಅಧಿಕಾರಿ ಸೋಮನಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು. ಇಬ್ರಾಹಿಂಪೂರ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ನೀರಾವರಿ ಕಾಲುವೆಯಿಂದ ಬರುವ ರೈತರು, ಮಾಲೀಕರು ತಮ್ಮ ಜಮೀನಿನಲ್ಲಿರುವ ಬದುವಿನ ಮಣ್ಣು ಅಗೆದು ಗ್ರಾಮಕ್ಕೆ ಹೋಗುವ ಡಾಂಬರು ರಸ್ತೆ ಮೇಲೆ ಸುರಿದಿದ್ದಾರೆ. ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದರಿಂದ ಮಳೆಯ ನೀರು ಹೊಲದ ಯರಿಮಣ್ಣಿನೊಂದಿಗೆ ಬೆರೆತು ವಾಹನ ಸವಾರರು ಅಪಘಾತಕ್ಕೀಡಾಗುತ್ತಾರೆ. ಅಪಘಾತಗಳಾಗಿ ಸಾವು-ನೋವು ಸಂಭವಿಸುವ ಮುನ್ನ ಪಿಡಬ್ಲ್ಯುಡಿ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಕೆಲ ತಪ್ಪಿತಸ್ಥ ರೈತರು ಹಾಗೂ ಅಧಿಕಾರಿಗಳನ್ನು ಪತ್ತೆ ಮಾಡಿ ಅವರನ್ನೇ ಹೊಣೆಗಾರರನ್ನಾಗಿಸಬೇಕು ಎಂದು ಒತ್ತಾಯಿಸಿದರು.
ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಸೈಕಲ್ ಮೂಲಕ, ದ್ವಿಚಕ್ರವಾಹನ ಸವಾರರು, ವೃದ್ಧರು, ಶಾಲಾ ಮಕ್ಕಳು ಸ್ಕಿಡ್ ಆಗಿ ಬೀಳುತ್ತಿದ್ದಾರೆ. ಜಮೀನಿನ ಮಣ್ಣು ತೆಗೆದು ರಸ್ತೆಗೆ ಹಾಕಿದವರ ಮೇಲೆ ಕ್ರಮ ಜರುಗಿಸಬೇಕು. ಇಬ್ರಾಹಿಂಪೂರ ಡಾಂಬರು ರಸ್ತೆ ಸ್ವಚ್ಛಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ರೈತರಾದ ರಾಜು ನಡುವಿನಮನಿ, ಈರಣ್ಣ ಶಿಡಗಂಡಿ, ಬಸವರಾಜ ಮುಧೋಳ, ಬಸವರಾಜ ಹೊನ್ನಕುದರಿ, ತಿರಕಪ್ಪ ಹೆಬಸೂರ, ಮೋಹನ ಹೊನ್ನಕೇರಿ, ಇತರರಿದ್ದರು.