

ರಾಯಚೂರು ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ನಾಯಕ ತಳವಾರ ಹೆಸರಿನಲ್ಲಿ ಪ್ರವರ್ಗ-1 ರಲ್ಲಿರುವ ಬೇರೆ ಸಮುದಾಯದವರು ಅಕ್ರಮವಾಗಿ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಮತ್ತು ಸಿಂಧುತ್ವ ಪ್ರಮಾಣ ಪತ್ರಗಳನ್ನು ತೆಗೆದುಕೊಂಡು ವಂಚಿಸುತ್ತಿರುವುದನ್ನು ಖಂಡಿಸಿ ಜಿಲ್ಲಾ ವಾಲ್ಮೀಕಿ ನಾಯಕ ಸಮಾಜ ಸಂಘಟನೆಗಳು ಒಕ್ಕೂಟಗಳಿಂದ ವತಿಯಿಂದ ಗುರುವಾರ ಎಡಿಸಿ ಶಿವಾನಂದ ಭಜಂತ್ರಿಗೆ ಮನವಿ ಸಲ್ಲಿಸಿದರು.
ಇತರೆ ಹಿಂದುಳಿದ ವರ್ಗಗಳ ಪ್ರವರ್ಗ-1 ರಲ್ಲಿರುವ ಬೆಸ್ತ, ಅಂಬಿಗ, ಕಬ್ಬಲಿಗ, ಕಬ್ಬೇರ, ಕೊಲಿ ಮುಂತಾದ ಜಾತಿಯವರಿಗೆ ನಾಯಕ ತಳವಾರರ ಹೆಸರಿನಲ್ಲಿ ಪರಿಶಿಷ್ಟ ಪಂಗಡದ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ನೀಡುವುದನ್ನು ನಿಲ್ಲಿಸಬೇಕು. ನಾಯಕ ತಳವಾರ ಜಾತಿಗೆ ಸೇರಿಲ್ಲದವರು ವಾಮ ಮಾರ್ಗದಲ್ಲಿ ಪರಿಶಿಷ್ಟ ಪಂಗಡದ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆದಿದ್ದಲ್ಲಿ ಕರ್ನಾಟಕ ಉಚ್ಚನ್ಯಾಯಲಯದ ಆದೇಶದಂತೆ ಅಂತಹವರ ಮೇಲೆ ಮತ್ತು ಅಂತಹ ಜಾತಿ ಪ್ರಮಾಣ ಪತ್ರಗಳನ್ನು ನೀಡಿದ ಅಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲು ಒತ್ತಾಯಿಸಿದರು.
ನಕಲಿ ಜಾತಿ ಪ್ರಮಾಣ ಪತ್ರಗಳಿಗೆ ಮೂಲ ಕಾರಣ ವೃತ್ತಿಗಾಗಿ ನಾಯಕ ತಳವಾರ ಜಾತಿಗೆ ಸೇರದೆ ಇತರೆ ಜಾತಿಗೆ ಬೆಸ್ತ, ಅಂಬಿಗ, ಕಬ್ಬಲಿಗ, ಕಬ್ಬೇರ, ಕೊಲಿ ಮುಂತಾದ ಜಾತಿಗೆ ಸೇರಿದವರು ತಳವಾರಿಕೆ ವೃತ್ತಿ ಮಾಡುತಿದ್ದಾರೆ. ಆದರೆ ನಾಯಕ ತಳವಾರರ ಹೆಸರು ಜಾತಿ ಸೂಚಕ ಪದವಾಗಿರುತ್ತದೆ. ರಾಜ್ಯ ಸರ್ಕಾರ ಕುಲ ಶಾಸ್ತ್ರಯ ಅಧ್ಯಯನದೊಂದಿಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವಾಗ ಅಲ್ಲಿಂದ ಪರಿಶಿಷ್ಟ ಪಂಗಡದ ಪಟ್ಟಿಯ ಕ್ರಮ ಸಂಖ್ಯೆ 38ರಲ್ಲಿ ಸೇರಿಸಿರುವುದು ನಾಯಕ ತಳವಾರ ಜಾತಿ ಮಾತ್ರ. ಆದ್ದರಿಂದ ಬೆಸ್ತ, ಅಂಬಿಗ, ಕಬ್ಬಲಿಗ, ಕಬ್ಬೇರ, ಕೊಲಿ ಮುಂತಾದ ಜಾತಿಗೆ ಸೇರಿದ ತಳವಾರರನ್ನು ಅವರು ಸೇರಿರುವ ಇತರೆ ಹಿಂದುಳಿದ ವರ್ಗಗಳ ಪ್ರವರ್ಗ-1 ರ ಕ್ರಮ ಸಂಖ್ಯೆ 6 ರಲ್ಲಿ ಬೆಸ್ತ ಮುಂತಾದವುಗಳ ಜೊತೆ ಸೇರಿಸಿ ಉದ್ಭವಿಸಿರುವ ಗೊಂದಲಕ್ಕೆ ತೆರೆ ಎಳೆಯಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಘುವೀರ ನಾಯಕ್, ಮಲ್ಲಿಕಾರ್ಜುನ ನಾಯಕ್, ಕೊಟ್ರೇಶಪ್ಪ ಕೋರಿ, ರಾಮ ನಾಯಕ್, ನರೇಂದ್ರ ನಾಯಕ್, ರಮೇಶ ನಾಯಕ, ರಾಮಕೃಷ್ಣ ನಾಯಕ, ರೂಪಾಶ್ರೀನಿವಾಸ ನಾಯಕ, ಕರಿಯಪ್ಪ ನಾಯಕ ಮಡ್ಡಿಪೇಟ, ರಾಮುಲು ನಾಯಕ , ವಿರುಪಾಕ್ಷಿ ನಾಯಕ ಸೇರಿ ಅನೇಕರು ಇದ್ದರು.