ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

Published on

ಶಿರಹಟ್ಟಿ: ಸವಿತಾ ಮಹರ್ಷಿ ಜಯಂತ್ಯುತ್ಸವವನ್ನು ಫೆ. 4ರಂದು ತಾಲೂಕಿನ ಬಹುತೇಕ ಇಲಾಖೆಗಳು ಆಚರಿಸದೇ ಸರ್ಕಾರಿ ಆದೇಶ ಉಲ್ಲಂಘಿಸಲಾಗಿದೆ. ಜಯಂತಿ ಆಚರಿಸದ ಇಲಾಖೆಗಳ ವಿರುದ್ಧ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ಸವಿತಾ ಸಮಾಜದ ತಾಲೂಕು ಅಧ್ಯಕ್ಷ ನಾಗರಾಜ ಆರೆಪಲ್ಲಿ ಆಗ್ರಹಿಸಿದ್ದಾರೆ.

ತಹಸೀಲ್ದಾರ್ ಕಾರ್ಯಾಲಯ, ಅರಣ್ಯ ಇಲಾಖೆ ಹಾಗೂ ಪಟ್ಟಣ ಪಂಚಾಯ್ತಿ ಹೊರತುಪಡಿಸಿ ಎಲ್ಲ ಇಲಾಖೆಗಳ ಅಧಿಕಾರಿಗಳು ಸವಿತಾ ಮಹಿರ್ಷಿ ಜಯಂತಿ ಆಚರಿಸಿಲ್ಲ. ಕಳೆದ ವಾರ ಜರುಗಿದ ಪೂರ್ವಭಾವಿ ಸಭೆಯಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರದೆ ಆಯಾ ಇಲಾಖೆಗಳಲ್ಲಿ ಜಯಂತಿ ಆಚರಿಸಬೇಕು ಎಂದು ತಹಸೀಲ್ದಾರ್ ಅನಿಲ್ ಬಡಿಗೇರ ಅವರು ಸೂಚಿಸಿದ್ದರು. 26 ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸುತ್ತೋಲೆ ಹಾಗೂ ದೂರವಾಣಿ ಮೂಲಕ ತಹಸೀಲ್ದಾರ್ ಕಾರ್ಯಾಲಯದ ಸಿಬ್ಬಂದಿ ತಿಳಿಸಿದರೂ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸವಿತಾ ಮಹರ್ಷಿ ಜಯಂತಿ ಆಚರಿಸದೆ ನಿಯಮ ಉಲ್ಲಂಘಿಸಿದ ಅಧಿಕಾರಿಗಳಿಗೆ ನೋಟಿಸ್ ನೀಡಿ ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ತಹಸೀಲ್ದಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net