

ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮಲದಕಲ್ ಗ್ರಾಪಂನಲ್ಲಿ 2024-25ಸಾಲಿನ 15 ನೇ ಹಣಕಾಸು
ಯೋಜನೆಯಡಿ ಬಿಡುಗಡೆಯಾದ ಅನುದಾನವನ್ನು ಪಿಡಿಓ ಮತ್ತು ಅಧ್ಯಕ್ಷರು ಸದಸ್ಯರಿಗೆ ಮಾಹಿತಿಯಿಲ್ಲದೆ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಆರೋಪಿಸಿ, ಕೂಡಲೇ ಕ್ರಮಕ್ಕೆ ಮುಂದಾಗಬೇಕೆಂದು ಆರ್‌ಟಿಐ ಕಾರ್ಯಕರ್ತ ಭೀಮರಾಯ ಹೊಸಮನಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 15 ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾಗಿರುವ ಕೆಲಸಗಳನ್ನು ನಿರ್ವಹಿಸದೇ ದೇವದುರ್ಗದ ಶ್ರೀ ಅಮರೇಶ್ವರ ಏಜೆನ್ಸಿಗೆ 21 ಲಕ್ಷ ರೂ ಹಾಗೂ ಓಂಕಾರ ಎಂಟರ್ ಪ್ರೈಸೆಸ್ ಸೇರಿದಂತೆ ಇತರೆ ಏಜೆನ್ಸಿಗಳಿಗೆ ಮೂರು ದಿನಗಳಲ್ಲಿ 13 ಲಕ್ಷ ರೂಪಾವತಿಸಲಾಗಿದೆ.
ನಕಲಿ ಬಿಲ್ ಸೃಷ್ಟಿಸಿ ಸರಿ ಸುಮಾರ 34 ಲಕ್ಷ ರೂ. ಎತ್ತುವಳಿ ಮಾಡಲಾಗಿದೆ. ಈ ಕುರಿತು ಜಿಪಂ ಸಿಇಓ ಅವರಿಗೆ ದೂರು ನೀಡಲಾಗಿತ್ತು. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ನೇತೃತ್ವದಲ್ಲಿ ತನಿಖೆ ನಡೆಸಿ ವರದಿಯೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ. ಕ್ರಮ ಮಾತ್ರ ಆಗಿಲ್ಲ. ಶೀಘ್ರದಲಿ ಕ್ರಮವಾಗದೇ ಹೋದರೆ ಜಿಲ್ಲಾ ಪಂಚಾಯಿತಿ ಕಚೇರಿ ಮುಂದೆ ಹೋರಾಟ ನಡೆಸುವದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪಂಚಾಯಿತಿ ಸದಸ್ಯರಾದ ಹನುಮಂತ ಗಿರಿಣಿ, ಸಿದ್ದನಗೌಡ, ಗೀತಮ್ಮ, ನಾಗರತ್ನ, ಮೈಲಾರಿ, ಹಂಪಯ್ಯನಾಯಕ ಇದ್ದರು.