ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹ

24blh4 protest--
Published on

ಬೈಲಹೊಂಗಲ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಲಂಚಾವತಾರದಲ್ಲಿ ತೊಡಗಿದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು. ಎಂಎಸ್‌ಐಎಲ್ ತೆರವುಗೊಳಿಸುವಂತೆ ಆಗ್ರಹಿಸಿ ಕಿತ್ತೂರು ಕರ್ನಾಟಕ ಸೇನೆ ಕಾರ್ಯಕರ್ತರು ಹಾಗೂ ಮಹಿಳೆಯರು ಪಟ್ಟಣದ ಎಂಎಸ್‌ಐಎಲ್ ಹಾಗೂ ಆಸ್ಪತ್ರೆ ಎದುರು ಮಂಗಳವಾರ ಪ್ರತ್ಯೇಕ ಪ್ರತಿಭಟನೆ ನಡೆಸಿದರು.

ಸಂಘಟನೆ ಜಿಲ್ಲಾಧ್ಯಕ್ಷ ಶಿವಾನಂದ ಕೋಲಕಾರ ಮಾತನಾಡಿ, ಸಾರ್ವಜನಿಕರಿಗೆ ಉಚಿತ ಸೇವೆ ಸಲ್ಲಿಸಬೇಕಾದ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ವೈದ್ಯರು ಶಸ ಚಿಕಿತ್ಸೆ ಹಾಗೂ ಹೆರಿಗೆಗೆ ಹಣ ನಿಗದಿ ಮಾಡಿದ್ದಾರೆ. ಇದರಿಂದ ಬಡ ರೋಗಿಗಳು ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಾಧ್ಯಕ್ಷ ರಾಜು ಬೋಳನ್ನವರ ಮಾತನಾಡಿ, ಪಟ್ಟಣದ ಬೆಳಗಾವಿ ರಸ್ತೆಯಲ್ಲಿನ ಎಂಎಸ್‌ಐಎಲ್‌ನಲ್ಲಿ ಮದ್ಯ ಖರೀದಿಸಿ ಮಳಿಗೆ ಹಿಂಭಾಗದಲ್ಲಿ ಸೇವಿಸುವ ವ್ಯಸನಿಗಳು ಶಾಲೆಯ ಗೇಟ್ ಭಾರಿಸುವುದು. ಗ್ಲಾಸ್ ಒಡೆಯುತ್ತಿದ್ದಾರೆ. ಹೀಗಾಗಿ, ಮುರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ನವೋದಯ ವಸತಿ ಶಾಲೆಯ ವಿದ್ಯಾರ್ಥಿನಿಯರು ಆತಂಕ ಪಡುತ್ತಿದ್ದಾರೆ. ಅಲ್ಲದೆ ವ್ಯಸನಿಗಳ ಹಾವಳಿಯಿಂದ ಈಚೆಗೆ ಬಣವೆ ಬೆಂಕಿಗೆ ಆಹುತಿಯಾಗಿವೆ ಎಂದು ದೂರಿದರು.

ಕೆಲ ದಿನಗಳ ಹಿಂದೆ ಅನುಮಾನಾಸ್ಪದ ವ್ಯಕ್ತಿಯೋರ್ವ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬಾಲಕಿಯರ ವಸತಿ ನಿಲಯದ ಬಾಗಿಲು ತೆರೆಯಲು ಪ್ರಯತ್ನಿಸಿದ ಘಟನೆ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹೀಗಾಗಿ, ವಿದ್ಯಾರ್ಥಿನಿಯರಿಗೆ ತೊಂದರೆಯಾಗುವ ಮುನ್ನವೇ ಎಚ್ಚೆತ್ತು ಎಂಎಸ್‌ಐಎಲ್ ತೆರವುಗೊಳಿಸಬೇಕು. ಜತೆಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಲಂಚಾವತಾರಕ್ಕೆ ಕಡಿವಾಣ ಹಾಕಬೇಕು ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಬಳಿಕ ಅಬಕಾರಿ ನಿರೀಕ್ಷಕ ಶ್ರೀಶೈಲ ಅಕ್ಕಿ, ಟಿಎಚ್‌ಒ ಡಾ.ಎಸ್.ಎಸ್.ಸಿದ್ದನ್ನವರ, ಮುಖ್ಯ ವೈದ್ಯಾಧಿಕಾರಿ ಡಾ.ನಿರ್ಮಲಾ ಮಹಾಂತಶೆಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು.

ರಫೀಕ್ ಬಡೇಘರ, ಮಲ್ಲಿಕಾರ್ಜುನ ಬಾಜಿ, ಅಭಿಷೇಕ ಕಲಾಲ, ಈರಣ್ಣ ಮುನವಳ್ಳಿ, ಸೋಮು ತೋಟಗಿ, ಆನಂದ ಪಾಟೀಲ, ಕಿರಣ ಬೆಳಗಾವಿಮಠ, ಬಾಬು ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net