

ಅರಸೀಕೆರೆ: ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಗೆ ಗೈರಾಗಿರುವ ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಸಮಿತಿಯ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು.
ತಾಲೂಕು ಪಂಚಾಯಿತಿ ಸಾಮರ್ಥ್ಯಸೌಧ ಸಭಾಂಗಣದಲ್ಲಿ ಸೋಮವಾರ ಗೀಜಿಹಳ್ಳಿ ಧರ್ಮಶೇಖರ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರಾದ ಜಾಜೂರು ಸಿದ್ದೇಶ್, ಕೆಸಿಡಿ ಕುಮಾರ್, ಪ್ರದೀಪ್ ಕುಮಾರ್ ಸೇರಿದಂತೆ ಬಹುತೇಕ ಸದಸ್ಯರು ಸರ್ಕಾರದ ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಬಸ್ ಕೊರತೆಯಿಂದಾಗಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಶಾಸಕ ಕೆ.ಎಂ.ಶಿವಲಿಂಗೇಗೌಡ ಇತ್ತೀಚೆಗೆ ಹೊಸ ಬಸ್ ಮಾರ್ಗಕ್ಕೆ ಚಾಲನೆ ನೀಡಿದರೆ ಅಧಿಕಾರಿಗಳು ಬಸ್ ಅನ್ನು ಡಿಪೋಗೆ ಕಳುಹಿಸಿದ್ದಾರೆ. ನೈಜ ಕಾರಣ ಪತ್ತೆಹಚ್ಚಿ ಪರಿಹಾರ ಕಂಡುಕೊಳ್ಳಲು ಕಾಲಕಾಲಕ್ಕೆ ಸಭೆ ನಡೆಸುತ್ತಿದ್ದು ಡಿಪೋ ವ್ಯವಸ್ಥಾಪಕರು ಪದೇ ಪದೆ ಗೈರಾಗುತ್ತಿರುವುದು ಸರಿಯಲ್ಲ. ಸಂಬಂಧಿಸಿದ ಅಧಿಕಾರಿಗಳು ತಕ್ಷಣವೇ ನೋಟಿಸ್ ನೀಡುವ ಜತೆಗೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಬೇಕು ಎಂದು ಪಟ್ಟುಹಿಡಿದರು.
ಮಧ್ಯಪ್ರವೇಶಿಸಿದ ತಾಪಂ ಇಒ ಸತೀಶ್ ಹಾಗೂ ಅಧ್ಯಕ್ಷ ಧರ್ಮಶೇಖರ್ ಸದಸ್ಯರ ಆಗ್ರಹದಂತೆ ಕ್ರಮಕ್ಕೆ ಶಿಫಾರಸು ಮಾಡುವ ಭರವಸೆ ನೀಡಿದರು.
ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಎಪ್‌ಡಿಎ ಸಿದ್ದೇಶ್ ಮಾತನಾಡಿ, ರಾಜ್ಯ ಸರ್ಕಾರದ ಯುವನಿಧಿ ಯೋಜನೆಗೆ 1190 ಪದವೀಧರರು ಹೆಸರು ನೋಂದಣಿ ಮಾಡಿಸಿದ್ದು 930 ಜನರಿಗೆ ಸವಲತ್ತು ತಲುಪಿಸಲಾಗಿದೆ. ಶೇ.90 ಪ್ರಗತಿ ಸಾಧಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಸೆಸ್ಕ್ ಎಇಇ ದೇವರಾಜ್ ಮಾತನಾಡಿ, ಗೃಹಜ್ಯೋತಿ ಯೋಜನೆಯಡಿ ಹೊಸದಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವ ವೇಳೆ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡುತ್ತಿದ್ದೇವೆ. ಹಾಲಿ ಚಾಲ್ತಿಯಲ್ಲಿರುವ ಸಂಪರ್ಕಗಳಿಗೆ ಯಾವುದೇ ಸಮಸ್ಯೆ ಎದುರಾಗದು. ಹಣ ಪಾವತಿಸಿ ವಿದ್ಯುತ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಸರ್ಕಾರ ಗೃಹಜ್ಯೋತಿ ಬಾಕಿ ಹಣ ಪಾವತಿಸಿದೆ ಎಂದು ಸಭೆಗೆ ತಿಳಿಸಿದರು.
ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಗಳ ಸಫಲತೆಯನ್ನು ಇಲಾಖೆಯ ಅಧಿಕಾರಿಗಳು ಸಭೆಯ ಮುಂದಿಟ್ಟರು.
ಉಪಾಧ್ಯಕ್ಷ ಜವನಪ್ಪ, ಸದಸ್ಯರಾದ ಬಸವರಾಜ್, ಸತೀಶ್, ವಿರೂಪಾಕ್ಷ, ಪರಮೇಶ್, ಚಾಂದ್ ಪಾಷ, ಕೃಷ್ಣೇಗೌಡ ಇನ್ನಿತರರು ಹಾಜರಿದ್ದರು.