ಸರ್ಕಾರಿ ವೈದ್ಯಕೀಯ ಕಾಲೇಜ್ ಬೇಡಿಕೆ, ಧರಣಿಗೆ ಪ್ರಗತಿಪರ ಚಿಂತಕರ ಬೆಂಬಲ, ಹೋರಾಟ ರಾಜಧಾನಿಗೆ ಒಯ್ಯುವ ಚಿಂತನೆ....!

medical college protest cintakara bembala
ವಿಜಯಪುರ ನಗರದ ಖಾಸಗಿ ಹೊಟೇಲ್‌ನಲ್ಲಿ ಪ್ರಗತಿ ಪರ ಚಿಂತಕರು, ಸಾಹಿತಿಗಳು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದರು. ಚಿಂತಕರಾದ ಸಿದ್ದನಗೌಡ ಪಾಟೀಲ, ನಿವೃತ್ತ ಪ್ರೊಪೆಸರ್ ಅರವಿಂದ ಮಾಲಗತ್ತಿ, ಪ್ರಗತಿಪರ ಚಿಂತಕ ಜಿ.ಬಿ. ಪಾಟೀಲ ಮತ್ತಿತರರಿದ್ದಾರೆ.
Published on

ವಿಜಯಪುರ: ಸರ್ಕಾರಿ ವೈದ್ಯಕೀಯ ಕಾಲೇಜ್‌ನ್ನು ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವ(ಪಿಪಿಪಿ)ಕ್ಕೆ ನೀಡುವ ಕ್ರಮ ಖಂಡಿಸಿ ಕಳೆದ 41 ದಿನಗಳಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ ಪ್ರಗತಿಪರ ಚಿಂತಕರು, ಸಾಹಿತಿಗಳು ಸಹ ಬೆಂಬಲ ವ್ಯಕ್ತಪಡಿಸಿದ್ದು, ಹೋರಾಟವನ್ನು ಜಿಲ್ಲೆಯಿಂದ ರಾಜಧಾನಿಗೆ ಕೊಂಡೊಯ್ಯುವ ಭರವಸೆ ನೀಡಿದರು.

ಜನಸಾಮಾನ್ಯರ ಆರೋಗ್ಯ ಹಾಗೂ ಬಡ ಮಕ್ಕಳ ವೈದ್ಯಕೀಯ ಶಿಕ್ಷಣ ದೃಷ್ಟಿಕೋನದೊಂದಿಗೆ ‘ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟ ಸಮಿತಿ’ಯಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ ಬೆಂಗಳೂರಿನಲ್ಲಿ ನೆಲೆಸಿರುವ ವಿಜಯಪುರ ಜಿಲ್ಲೆಯ ಚಿಂತಕರು, ಸಾಹಿತಿಗಳು ಹಾಗೂ ಪ್ರಜ್ಞಾವಂತರು ಸಹ ಬೆಂಬಲ ವ್ಯಕ್ತಪಡಿಸುತ್ತಿದ್ದು, ಶೀಘ್ರದಲ್ಲೇ ರಾಜಧಾನಿಯಲ್ಲೂ ಹೋರಾಟ ರೂಪಿಸಲಾಗುವುದೆಂದು ಚಿಂತಕರಾದ ಸಿದ್ದನಗೌಡ ಪಾಟೀಲ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಂಗಳೂರಿನಲ್ಲಿರುವ ಜಿಲ್ಲೆಯ ಪ್ರಮುಖರು ಸಭೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ಸ್ಥಾಪಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದಲ್ಲದೇ ಬೆಂಗಳೂರಿನಲ್ಲಿಯೂ ಪೂರಕವಾಗಿ ಪ್ರತಿಭಟನೆ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿ, ಆರೋಗ್ಯ ಸಚಿವರು, ಉನ್ನತ ವೈದ್ಯಕೀಯ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಡಲಾಗುವುದಲ್ಲದೇ ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ಸ್ಥಾಪಿಸಲು ಒತ್ತಾಯಿಸಲಾಗುವುದು ಎಂದರು.

ಖಾಸಗೀಕರಣಕ್ಕೆ ವಿರೋಧ

ಕೇವಲ ವಿಜಯಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜ್ ಬರಬೇಕೆಂಬ ಏಕೈಕ ಉದ್ದೇಶ ಈ ಹೋರಾಟದ ಹಿಂದಿಲ್ಲ. 1991 ರ ನಂತರ ಬಂದ ಜಾಗತೀಕರಣದ ಭಾಗವಾಗಿ ಖಾಸಗೀಕರಣ ಹೆಚ್ಚಾಗಿದೆ. ಸೇವಾವಲಯದಲ್ಲೂ ಖಾಸಗಿ ಬಂಡವಾಳ ಹೂಡಿಕೆ ಹೆಚ್ಚಾಗಿದೆ. ಅದಕ್ಕೆ ಬೂಟ್ ಮತ್ತು ಪಿಪಿಪಿ ಎಂಬ ಆಕರ್ಷಕ ಹೆಸರುಗಳನ್ನು ಇಡಲಾಗಿದೆ. ಈ ಎರಡೂ ವ್ಯವಸ್ಥೆಗಳು ದೇಶಕ್ಕೆ ಮಾರಕ. ಹೀಗಾಗಿ ಈ ವ್ಯವಸ್ಥೆ ವಿರುದ್ಧ ನಮ್ಮ ಹೋರಾಟವಿದೆ ವಿನಃ ಯಾವುದೇ ರಾಜ್ಯ ಅಥವಾ ಕೇಂದ್ರ ಸರ್ಕಾರದ ವಿರುದ್ಧವಲ್ಲ ಎಂದರು.

ಉತ್ಪಾದನೆ ವಲಯ, ಸೇವಾ ವಲಯಗಳು ಸರ್ಕಾರಿ ಸ್ವಾಮ್ಯದಲ್ಲಿಯೇ ಇರಬೇಕೆಂಬುದು ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯವಾಗಿತ್ತು. ಆದರೆ ಇತ್ತೀಚಿನ ಸರ್ಕಾರಗಳು ಸಂವಿಧಾನದ ರಾಜ್ಯ ನಿರ್ದೇಶಕ ತತ್ವ ಹಾಗೂ ಕಲ್ಯಾಣ ರಾಜ್ಯದ ಪರಿಕಲ್ಪನೆಯಿಂದ ದೂರವಾಗಿ ಎಲ್ಲವನ್ನೂ ಖಾಸಗಿ ಮಾಡಲು ಹೊರಟಿವೆ ಎಂದು ಅಸಮಾಧಾನ ಹೊರಹಾಕಿದರು.

ಮೆಡಿಕಲ್ ಮಾಫಿಯಾ

ಸರ್ಕಾರ ಹೆದ್ದಾರಿ, ಆರೋಗ್ಯ, ಶಿಕ್ಷಣ, ಎಲ್ಐಸಿ ಎಲ್ಲವನ್ನೂ ಖಾಸಗೀಕರಣ ಮಾಡಿದರೆ ಸರ್ಕಾರದ ಕೆಲಸ ಏನು? ಎಂದು ಪ್ರಶ್ನಿಸಿದ ಸಿದ್ದನಗೌಡ ಪಾಟೀಲರು, ಜನರಿಗೆ ಪೂರಕವಾಗಿ ಸರ್ಕಾರ ಇರಬೇಕು. ಸರ್ಕಾರಿ ವೈದ್ಯಕೀಯ ಕಾಲೇಜು ಪಿಪಿಪಿ ಮಾದರಿಗೆ ನೀಡಿದರೆ ಆರೋಗ್ಯದ ಹಕ್ಕು ನಿರಾಕರಣೆ ಮಾಡಿದಂತೆ. ವೈದ್ಯಕೀಯ ಶಿಕ್ಷಣ ಮಾಫಿಯಾ ಆಗಿದೆ. ಬಡವರ ಮಕ್ಕಳಿಗೆ ಶಿಕ್ಷಣ ಸಿಗದಂತಾಗಿದೆ. ಮ್ಯಾನೇಜ್‌ಮೆಂಟ್ ಕೋಟಾದಲ್ಲಿ ಹೊರದೇಶಗಳ ವಿದ್ಯಾರ್ಥಿಗಳಿಗೆ ಸೀಟು ಮಾರುವ ದಂಧೆ ಜೋರಾಗಿದೆ ಎಂದರು.

ಜಿಲ್ಲೆಯ ರಾಜಕಾರಣಿಗಳು ಬೇರೆ ವಿಷಯಗಳ ಬಗ್ಗೆ ಬಹಳಷ್ಟು ಮಾತನಾಡುತ್ತಾರೆ. ಆದರೆ ಕ್ಯಾಬಿನೆಟ್‌ನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್‌ಗಾಗಿ ಏಕೆ ಚರ್ಚೆ ಮಾಡಲ್ಲ? ಬರುವ ಚಳಿಗಾಲದ ಅಧಿವೇಶನದಲ್ಲಿ ಪ್ರಶ್ನೆ ಮಾಡಿ- ಚರ್ಚಿಸಿ ಒಂದು ತೀರ್ಮಾನ ತೆಗೆದುಕೊಂಡು ಬನ್ನಿ. ಇಲ್ಲದಿದ್ದರೆ ಹೋರಾಟ ತೀವ್ರಗೊಳ್ಳಲಿದೆ ಎಂದರು.

ಕನಕಪುರದಲ್ಲಿ ಸರ್ಕಾರದಿಂದಲೇ ವೈದ್ಯಕೀಯ ಕಾಲೇಜ್ ಸ್ಥಾಪನನೆಯಾಗುತ್ತದೆ. ಆದರೆ ವಿಜಯಪುರದಲ್ಲಿ ಪಿಪಿಪಿ ಮಾದರಿ ಏಕೆ? ಏಕೆಂದರೆ ರಾಜಕಾರಣಿಗಳು ಖಾಸಗಿ ಕಂಪನಿಗಳಿಗೆ ಮಾತು ಕೊಟ್ಟಿರುವ ಅನುಮಾನ ಇದೆ. ಹಣಕಾಸಿನ ಒಪ್ಪಂದವಾಗಿರಬಹುದೆಂಬ ಗುಮಾನಿ ಇದೆ ಎಂದರು.

ನಿವೃತ್ತ ಪ್ರೊಪೆಸರ್ ಅರವಿಂದ ಮಾಲಗತ್ತಿ ಮಾತನಾಡಿ, ಶ್ರೀಸಾಮಾನ್ಯರಿಗೆ ಶಿಕ್ಷಣ ಕ್ಷೇತ್ರದಲ್ಲಿರುವ ದಾಹ ಹೊಟ್ಟೆ ತುಂಬಿದವರಿವೆ ಇರಲ್ಲ. ದಾಹ ಇರುವವರು ಜಿದ್ದಿಗೆ ಬಿದ್ದು ಕಲಿತು ಸಾಧಿಸುತ್ತಾರೆ. ಸಾಧಿಸಿದ ಬಳಿಕ ಧಕ್ಕಿದ್ದನ್ನು ಇತರರಿಗೆ ನೀಡುತ್ತಾರೆ. ಹೀಗಾಗಿ ಖಾಸಗೀಕರಣ ಮಾಡಿದರೆ ದಾಹ ತಣಿಯಲು ಸಾಧ್ಯವಿಲ್ಲ ಎಂದರು.

ಪ್ರಗತಿಪರ ಚಿಂತಕ ಜಿ.ಬಿ. ಪಾಟೀಲ ಮಾತನಾಡಿ, ಸದ್ಯದ ಪರಿಸ್ಥಿತಿಯಲ್ಲಿ ಸ್ವಂತ ಆಸ್ತಿಯನ್ನೇ ಉಳಿಸಿಕೊಳ್ಳಲಾಗದ ಸ್ಥಿತಿ ಇರುವಾಗ ಸರ್ಕಾರಿ ಆಸ್ತಿ ಉಳಿಸಲು ಹೊರಟಿರುವ ಹೋರಾಟ ಸಮಿತಿಯ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.

ದೇಶದಲ್ಲಿಂದು ಅನೇಕ ಕಾರ್ಖಾನೆಗಳನ್ನು ವ್ಯವಸ್ಥಿತವಾಗಿ ಮಾರಾಟ ಮಾಡುವ ಹುನ್ನಾರ ನಡೆದಿದೆ. ರಾಜ್ಯದಲ್ಲಿ ವಿಶ್ವೇಶ್ವರಯ್ಯ ಪ್ರಾರಂಭಿಸಿದ ಎಲ್ಲ ಸಂಸ್ಥೆ ಮಾರಾಟವಾಗಿದ್ದು ಕೇವಲ ಒಂದು ಕ್ಲಬ್ ಮಾತ್ರ ನಡೆಯುತ್ತಿದೆ. ಚಿನ್ನದ ಮೊಟ್ಟೆ ಇಡುವ ಕೋಳಿಯನ್ನೇ ಕೊಲ್ಲಲಾಗುತ್ತಿದೆ. ಸರ್ಕಾರಿ ವೈದ್ಯಕೀಯ ಕಾಲೇಜ್ ಎಂಬುದು ಸಾರ್ವಜನಿಕರ ಆಸ್ತಿ. ಅದನ್ನು ಉಳಿಸಿಕೊಳ್ಳಬೇಕೆಂದರು.

ಬಸವರಾಜ ಸೂಳಿಬಾವಿ ಮಾತನಾಡಿ, ಪ್ರಜಾಪ್ರಭುತ್ವ ಜನರ ಮೇಲೆ ನಿಂತಿದೆ. ಜನಸಾಮಾನ್ಯರ ಮತಗಳ ಮೇಲೆ ಸರ್ಕಾರಗಳಿವೆ. ಆದರೆ ಖಾಸಗಿ ಮತ್ತು ಬಂಡವಾಳ ಶಾಹಿ ಪರ ಆಡಳಿತ ನೀಡುತ್ತಿದ್ದಾರೆ. ಖಾಸಗಿ ಪರ ನಿಂತಿದ್ದಾರೆ. ಜನರ ಪರ ನಿಲ್ಲುತ್ತಿಲ್ಲ. ಹಾಗಾದರೆ ಇದು ಜನವಿರೋಧಿ ನೀತಿ ಇಲ್ಲವೇ? ಜನರಿಗೆ ಅರ್ಥವಾಗಬಾರದೇ? ಜಿಲ್ಲೆಯ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳದಿದ್ದರೆ ಈ ಖಾಸಗೀಕರಣದ ಭೂತ ಎಲ್ಲ ಹಳ್ಳಿ, ಕೇರಿ, ಮೊಹಲ್ಲಾಗಳಿಗೂ ನುಗ್ಗಲಿದೆ ಎಂದರು.

ಮುಖಂಡರಾದ ಷರೀಪ್ ಮುತ್ತು ಬಿಳಿಎಲೆ, ವಿದ್ಯಾವತಿ ಅಂಕಲಗಿ, ಚನ್ನು ಕಟ್ಟಿಮನಿ, ಫಾದರ್ ಕೆವಿನ್, ಭರತಕುಮಾರ ಎಚ್.ಟಿ, ಅನೀಲ ಹೊಸಮನಿ, ಶ್ರೀನಾಥ ಪೂಜಾರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net