ಕೆಐಎಗೆ 2ನೇ ವಿಶ್ವದರ್ಜೆ ರಸ್ತೆಗೆ ಆಗ್ರಹ: ಕೇಂದ್ರ ಸಚಿವೆ ಕರಂದ್ಲಾಜೆಗೆ ಕೆಎಸ್‌ಟಿಒಎ ಮನವಿ

Vijayavani-Featured-Image
Published on

ಬೆಂಗಳೂರು: ಬೆಂಗಳೂರು ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ತಲುಪಲು ಎರಡನೇ ವಿಶ್ವದರ್ಜೆಯ ರಸ್ತೆಯನ್ನು ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕೋರಿ ಕರ್ನಾಟಕ ರಾಜ್ಯ ಪ್ರವಾಸಿ ಆಪರೇಟರ್‌ಗಳ ಸಂಘ (ಕೆಎಸ್‌ಟಿಒಎ) ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಸಲ್ಲಿಸಿದೆ.

ಪ್ರಸ್ತುತ ಕೆಐಎನ ಎರಡೂ ಟರ್ಮಿನಿಲ್‌ಗಳಿಂದ ಪ್ರತಿನಿತ್ಯ 1.45 ಲಕ್ಷ ಪ್ರಯಾಣಿಕರು ವಿಮಾನ ಸೇವೆ ಪಡೆಯುತ್ತಿದ್ದಾರೆ. ಈಗಾಗಲೇ ನಿತ್ಯ 700 ವಿಮಾನಗಳ ಹಾರಾಟವಿದ್ದು, ಭವಿಷ್ಯದಲ್ಲಿ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಲಿದೆ. ಹಾಗಾಗಿ ಹಾಲಿ ಹೆಬ್ಬಾಳದ ಮೂಲಕ ಚಾಲ್ತಿಯಲ್ಲಿರುವ ಏರ್‌ಪೋರ್ಟ್ ರಸ್ತೆಗೆ ಪರ್ಯಾಯವಾಗಿ ವರ್ತುಲ ರಸ್ತೆಯಿಂದ ಯಾವುದೇ ಅಡೆತಡೆ ಇಲ್ಲದೆ ನೇರವಾಗಿ ವಿಮಾನ ನಿಲ್ದಾಣಕ್ಕೆ ತಲುಪಲು ವಿಶ್ವದಜೆರ್ಯ ರಸ್ತೆಮಾರ್ಗ ಅಗತ್ಯವಿದೆ. ಇದರ ಅನುಷ್ಠಾನಕ್ಕೆ ಕೇಂದ್ರ ಸಕಾರ ಅವಕಾಶ ಮಾಡಿಕೊಡಬೇಕು ಎಂದು ಸಂಘವು ಪತ್ರದ ಮೂಲಕ ಸಚಿವರನ್ನು ಆಗ್ರಹಿಸಿದೆ.

ಹೊಸ ರಸ್ತೆಯು ರಿಂಗ್ ರಸ್ತೆಯಿಂದ ಆರಂಭಗೊಂಡು ಹೆಣ್ಣೂರು-ಥಣಿಸಂದ್ರ, ಬಾಗಲೂರು, ಬಂಡಿಕೊಡಿಗೇಹಳ್ಳಿ, ಮೈಲನಹಳ್ಳಿ, ಚಿಕ್ಕನಹಳ್ಳಿ, ಬೇಗೂರು ಮಾರ್ಗವಾಗಿ ಕಲ್ಪಿಸಿದರೆ ಏರ್‌ಪೋರ್ಟ್ ಪ್ರಯಾಣ ಸುಲಭವಾಗಲಿದೆ ಎಂದು ಸಂಘದ ಅಧ್ಯಕ್ಷ ಕೆ.ರಾಧಾಕೃಷ್ಣ ಹೊಳ್ಳ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net