ಮೈಸೂರು: ಸಹಕಾರ ಕ್ಷೇತ್ರದ ನೇಮಕ ಸಮಯದಲ್ಲಿ ಸಹಕಾರ ವಿಷಯದಲ್ಲೇ ಪದವಿ, ಸ್ನಾತಕೋತ್ತರ ಪದವಿ ಪಡೆದವರಿಗೆ ಶೇ.10ರಷ್ಟು ಉದ್ಯೋಗ ಮೀಸಲಿಡಬೇಕು ಎಂದು ಮೈಸೂರು ವಿಶ್ವವಿದ್ಯಾಲಯ ಅರ್ಥಶಾಸ್ತ್ರ ಮತ್ತು ಸಹಕಾರ ವಿಭಾಗದ ವಿದ್ಯಾರ್ಥಿಗಳು ಹಾಗೂ ಸಂಶೋಧಕರು, ಸರ್ಕಾರವನ್ನು ಆಗ್ರಹಿಸಿದರು.
ಅಲ್ಲದೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಸಹಕಾರ ವಿಷಯ ಬೋಧನೆ ವಿಷಯವಾಗಿ ಪರಿಗಣಿಸಿ ತಮ್ಮದೇ ಕ್ಷೇತ್ರದಲ್ಲಿ ಉದ್ಯೋಗ ಸಿಗುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸಂಶೋಧನಾ ವಿದ್ಯಾರ್ಥಿ ಮಹೇಶ್ ಕೋರಿದರು.
ಸಹಕಾರ ವಿಷಯ ಅಧ್ಯಯನ ಮಾಡಿದ್ದರೂ ಸಹ ಉದ್ಯೋಗಾವಕಾಶ ಸಿಗುತ್ತಿಲ್ಲ. ಹೀಗಾಗಿ ಎಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಹಕಾರ ವಿಷಯ ಬೋಧನಾ, ಐಚ್ಛಿಕ ವಿಷಯವಾಗಿ ಪರಿಚಯಿಸಬೇಕು ಎಂದು ಮನವಿ ಮಾಡಿದರು.
ಸಹಕಾರಿ ಸಂಘ, ಸಂಸ್ಥೆಗಳು, ಬ್ಯಾಂಕಿಂಗ್ ವಲಯದಲ್ಲಿ ಸಹಕಾರ ಡಿಪ್ಲೊಮಾ ಕೋರ್ಸ್ ಮಾತ್ರ ಪರಿಗಣಿಸದೇ ಸಹಕಾರ ವಿಷಯದಲ್ಲಿ ಪದವಿ, ಸ್ನಾತಕೋತ್ತರ ಪದವಿ, ಪಿಎಚ್.ಡಿ ಪಡೆದ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ಆದ್ಯತೆ ನೀಡಬೇಕು ಎಂದು ಕೋರಿದರು. ಸಂಘದ ಡಾ. ಚಂದ್ರಶೇಖರ್, ಡಾ. ಶಿವಕುಮಾರ್, ಸುಭಾಷ್ ಇತರರಿದ್ದರು.